ಹೈದರಾಬಾದ್: ದೇಶದಲ್ಲಿ ಇವತ್ತೂ ಕೂಡಾ 4 ಸಾವಿರಕ್ಕೂ ಹೆಚ್ಚು ಜನರು ಮಾರಕ ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಪ್ರತಿದಿನ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಕೊರೊನಾದಿಂದ ಜನರು ಹತ್ತು ಹಲವು ರೀತಿಯಲ್ಲಿ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಕ್ರಿಕೆಟ್ ಆಟಗಾರರು ತಮ್ಮದೇ ರೀತಿಯಲ್ಲಿ ಸಹಾಯಕ್ಕೆ ಧಾವಿಸಿದ್ದಾರೆ.
24 ಗಂಟೆಯಲ್ಲಿ 3.6 ಕೋಟಿ ರೂ: ಕೊಹ್ಲಿ-ಅನುಷ್ಕಾ ದಂಪತಿಯ ಅಭಿಯಾನ
ಸುಮಾರು 7 ಕೋಟಿ ರೂ. ಹಣ ಸಂಗ್ರಹಿಸುವ ಗುರಿ ಹೊಂದಿರುವ ದಂಪತಿ ತಾವು ಆರಂಭಿಸಿರುವ ವಿಶೇಷ ಅಭಿಯಾನದ ಮೂಲಕ ಈಗಾಗಲೇ 2 ಕೋಟಿ ರೂ.ನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
1 ಕೋಟಿ ರೂ ನೀಡಿದ ಸಚಿನ್ ತೆಂಡೂಲ್ಕರ್
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿರುವ ಕ್ರಿಕೆಟ್ ಲೋಕದ ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್, ಮಿಷನ್ ಆಕ್ಸಿಜನ್ಗೆ 1 ಕೋಟಿ ರೂ. ನೀಡಿದ್ದಾರೆ. 250ಕ್ಕೂ ಯುವ ಉದ್ಯಮಿಗಳ ಗುಂಪು ಆಕ್ಸಿಜನ್ ಸಾಂದ್ರಕ ಆಮದು ಮಾಡಿಕೊಳ್ಳಲು ಹಾಗೂ ದೇಶಾದ್ಯಂತ ಇರುವ ಆಸ್ಪತ್ರೆಗಳಿಗೆ ದಾನ ಮಾಡುವ ಉದ್ದೇಶದಿಂದ ಮಿಷನ್ ಆಕ್ಸಿಜನ್ ಪ್ರಾರಂಭಿಸಿದ್ದಾರೆ.
ಸಹಾಯ ಹಸ್ತ ಚಾಚಿದ ರಿಷಭ್ ಪಂತ್
23 ವರ್ಷದ ಉದಯೋನ್ಮುಖ ಕ್ರಿಕೆಟಿಗ ರಿಷಭ್ ಪಂತ್ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮಾನಿಟರಿ ಡೊನೇಷನ್ ಮೂಲಕ ದೇಶದ ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್ ಸಹಿತ ಬೆಡ್ ಮತ್ತು ಕೋವಿಡ್ ರಿಲೀಫ್ ಕಿಟ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿಸಲು ಹೆಮ್ಕುಂಟ್ ಫೌಂಡೇಶನ್ ಜೊತೆಗೆ ಅವರು ಕೈಜೋಡಿಸಿದ್ದಾರೆ.
200 ಆಕ್ಸಿಜನ್ ಕಾನ್ಸೆಂಟ್ರೇಟರ್ ನೀಡಲು ಮುಂದಾದಪಾಂಡ್ಯ ಬ್ರದರ್ಸ್
ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬದ ಪರವಾಗಿ 200 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. "ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ದೇಶ ಅನುಭವಿಸುತ್ತಿರುವ ಕಷ್ಟವನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಕಾರ್ಮಿಕರಿಗೆ ಕೃತಜ್ಞತೆಗಳು" ಎಂದು ಅವರು ಹೇಳುತ್ತಾರೆ.