ಸೌತಾಂಪ್ಟನ್: 80ರ ದಶಕದಲ್ಲಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ನಡೆದಿದ್ರೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಫೈನಲಿಸ್ಟ್ಗಳಾಗಿರುತ್ತಿದ್ದವು. ದಾಖಲೆಗಳನ್ನು ಗಮನಿಸಿದರೆ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನ ಮಣಿಸಿ ಚಾಂಪಿಯನ್ ಆಗಿರುತ್ತಿತ್ತು ಎಂದು ಮಾಜಿ ವಿಂಡೀಸ್ ವೇಗಿ ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಕಾಮೆಂಟೇಟರ್ ಆಗಿರುವ ಬಿಷಬ್ ಟಿವಿ ನಿರೂಪಕಿ ಹಾಗೂ ಬುಮ್ರಾ ಪತ್ನಿ ಸಂಜನಾ ಗಣೇಶನ್ ಅವರ ಜೊತೆಗಿನ ಸಂಭಾಷಣೆ ವೇಳೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ನಾನು 1980ರ ಉತ್ತರಾರ್ಧದಲ್ಲಿ ಆಡಿದ್ದೇನೆ. ವೆಸ್ಟ್ ಇಂಡೀಸ್ 1979ರಿಂದ 1989-90ರ ವರೆಗೂ ಶ್ರೇಷ್ಠ ತಂಡವಾಗಿ ಆಡುತ್ತಿತ್ತು. ಹಾಗಾಗಿ ನಾನು ಪಾಕಿಸ್ತಾನವನ್ನು ಕಠಿಣ ತಂಡವೆಂದು ಭಾವಿಸುತ್ತೇನೆ. ಕೆಲವೊಂದು ಸಮಯ ಆಸ್ಟ್ರೇಲಿಯಾ ಕೂಡ ಉತ್ತಮ ತಂಡವಾಗಿತ್ತು. ಆದರೆ, ವೆಸ್ಟ್ ಇಂಡೀಸ್ ಆ ಸಂದರ್ಭದಲ್ಲಿ ಖಂಡಿತಾ ಬಲಿಷ್ಠವಾಗಿತ್ತು ಎಂದು ಬಿಷಪ್ ಹೇಳಿದ್ದಾರೆ.
1980-95ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ಪ್ರಬಲ ತಂಡವಾಗಿತ್ತು. ಅಲ್ಲದೇ ಆ ಸಮಯದಲ್ಲಿ ಒಂದು ಟೆಸ್ಟ್ ಪಂದ್ಯ ಅಥವಾ ಸರಣಿ ಕಳೆದುಕೊಂಡಿರಲಿಲ್ಲ ಎನ್ನುವುದನ್ನು ಬಿಷಪ್ ನೆನಪು ಮಾಡಿಕೊಂಡಿದ್ದಾರೆ.
ಖಂಡಿತವಾಗಿ ವೆಸ್ಟ್ ಇಂಡೀಸ್ ಗೆಲ್ಲುತ್ತಿತ್ತು. ಕೇಳಿ, ನನ್ನ ಮೇಲೇ ಕೂಗಾಡಬೇಡಿ, ಬೇಕಾದ್ರೆ ದಾಖಲೆಗಳನ್ನು ಪರಿಶೀಲಿಸಿ. 1980-81 ರಿಂದ 90ರ ದಶಕದ ವರೆಗೂ ವೆಸ್ಟ್ ಇಂಡೀಸ್ ಒಂದೂ ಟೆಸ್ಟ್ ಸರಣಿಯನ್ನು ಸೋತಿಲ್ಲ, ಅದು ಟೆಸ್ಟ್ ಕ್ರಿಕೆಟ್ನಲ್ಲಿನ ನಂಬಲಾಸಾಧ್ಯವಾದ ಇತಿಹಾಸ. ವೆಸ್ಟ್ ಇಂಡೀಸ್ ತಂಡವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ವಾದವಿಲ್ಲದೇ ಚಾಂಪಿಯನ್ ಎಂದು ಒಪ್ಪಿಕೊಳ್ಳಬಹುದಿತ್ತು ಎಂದು ತಿಳಿಸಿದ್ದಾರೆ.