ಜೋಹಾನ್ಸ್ಬರ್ಗ್:ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪ್ಯಾನೆಲ್ ಅಂಪೈರ್ ಆಗಿ ನೇಮಕಗೊಂಡು 200ಕ್ಕೂ ಅಧಿಕ ಏಕದಿನ ಹಾಗೂ 100 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಸುದೀರ್ಘ ಸೇವೆ ಸಲ್ಲಿಸಿದ ದಕ್ಷಿಣ ಆಫ್ರಿಕಾದ ರೂಡಿ ಕೊರ್ಟ್ಜೆನ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ರೂಡಿ ಕೊರ್ಟ್ಜೆನ್(73) ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಿವರ್ಡೇಲ್ ಎಂಬಲ್ಲಿ ರಸ್ತೆ ಅಪಘಾತವಾಗಿದೆ. ಇವರೊಂದಿಗೆ ಪ್ರಯಾಣಿಸುತ್ತಿದ್ದ ಇತರೆ ಮೂವರು ಕೂಡಾ ವಿಧಿವಶರಾಗಿದ್ದಾರೆ. ಗಾಲ್ಫ್ ಆಟವಾಡಿದ ನಂತರ ಕೇಪ್ಟೌನ್ನಿಂದ ನೆಲ್ಸನ್ ಮಂಡೇಲಾ ಕೊಲ್ಲಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ಅವರ ಪುತ್ರ ಮಾಹಿತಿ ನೀಡಿದರು.
1992ರಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಮೂಲಕ ಇವರು ಅಂಪೈರ್ ಆಗಿ ಕಾರ್ಯಾರಂಭಿಸಿದ್ದರು. ಬಳಿಕ 1997ರಲ್ಲಿ ಪೂರ್ಣಾವಧಿಯ ಐಸಿಸಿ ಅಂಪೈರ್ ಆಗಿ ನೇಮಕಗೊಂಡಿದ್ದರು. ಸ್ಟೀವ್ ಬಕ್ನರ್ ನಂತರ 200ಕ್ಕೂ ಹೆಚ್ಚು ಏಕದಿನ ಹಾಗೂ 100 ಟೆಸ್ಟ್ಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿರುವ ಹೆಗ್ಗಳಿಕೆ ಇವರದ್ದು. 2003 ಮತ್ತು 2007ರ ವಿಶ್ವಕಪ್ ಫೈನಲ್ನಲ್ಲಿ ರೂಡಿ ಕೊರ್ಟ್ಜೆನ್ ಥರ್ಡ್ ಅಂಪೈರ್ ಆಗಿದ್ದರು.
ಹಿರಿಯ, ಅನುಭವಿ ಅಂಪೈರ್ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಕಪ್ಪು ಪಟ್ಟಿ ಧರಿಸಿ, ಮೈದಾನಕ್ಕೆ ಇಳಿಯಲಿದ್ದಾರೆ. ರೂಡಿ ಕೊರ್ಟ್ಜೆನ್ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಕಂಬನಿ ಮಿಡಿದಿದ್ದಾರೆ.