ಇಸ್ಲಾಮಾಬಾದ್(ಪಾಕಿಸ್ತಾನ):ಐಸಿಸಿಯ ಎಲೈಟ್ ಪ್ಯಾನೆಲ್ ಅಂಪೈರ್ ಆಗಿ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಅಂಗಡಿ ಬಂದ್ ಮಾಡಿ ಮನೆಗೆ ಬರುತ್ತಿದ್ದಾಗ ಘಟನೆ ನಡೆದಿದೆ.
ಪಾಕಿಸ್ತಾನದ ಲೆಜೆಂಡರಿ ಅಂಪೈರ್ ಆಗಿದ್ದ ರೌಫ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಕೆಲಸ ಮಾಡಿದ್ದರು. ಆದರೆ, 2013ರಲ್ಲಿ ಐಪಿಎಲ್ನಲ್ಲಿ ಬುಕ್ಕಿಗಳಿಂದ ದುಬಾರಿ ಉಡುಗೊರೆ ಪಡೆದುಕೊಂಡಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಾಗಿ, ವಿಚಾರಣೆ ನಡೆಸಿದ್ದ ಐಸಿಸಿ ಶಿಸ್ತು ಸಮಿತಿ ಅವರನ್ನು ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಂಪೈರಿಂಗ್ಗೆ ನಿಷೇಧ ಹೇರಿತ್ತು.
ಇದಾದ ಬಳಿಕ ಲಾಹೋರ್ನಲ್ಲಿ ಚಪ್ಪಲಿ, ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ಅಂಗಡಿ ಬಂದ್ ಮಾಡಿ ಮನೆಗೆ ಬರುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಐಪಿಎಲ್ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಅಸಾದ್ ರೌಫ್
ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ ಸರಣಿ: ಕಾಂಗರೂ ತಂಡದಿಂದ ಮಾರ್ಷ್, ಸ್ಟಾರ್ಕ್, ಸ್ಟೋಯ್ನಿಸ್ ಔಟ್
ರೌಫ್ ಐಸಿಸಿ ಎಲೈಟ್ ಪ್ಯಾನೆಲ್ನಲ್ಲಿ ಸೇರಿಕೊಂಡ ಬಳಿಕ 47 ಟೆಸ್ಟ್, 98 ಏಕದಿನ ಹಾಗೂ 23 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2013ರಲ್ಲಿ ವಾರ್ಷಿಕ ಸಾಧನೆಯ ಪ್ರಶಸ್ತಿ ಸಹ ಗಿಟ್ಟಿಸಿಕೊಂಡಿದ್ದರು. 1998ರಿಂದ ತಮ್ಮ ಅಂಪೈರಿಂಗ್ ಪ್ರಯಾಣ ಆರಂಭಿಸಿದ್ದ ರೌಫ್, 2000ರಲ್ಲಿ ಪಾಕ್-ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಚೊಚ್ಚಲ ಸಲ ಅಂಪೈರಿಂಗ್ ಮಾಡಿದ್ದರು.
ದಕ್ಷ ಅಂಪೈರ್ ಆಗಿ ಗುರುತಿಸಿಕೊಂಡಿದ್ದ ಇವರು, ಪಾಕಿಸ್ತಾನದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಸಹ ಆಡಿದ್ದಾರೆ. 71 ಪ್ರಥಮ ದರ್ಜೆ, 40 ಲಿಸ್ಟ್ ಎ ಪಂದ್ಯಗಳಿಂದ ಮೂರು ಶತಕ ಹಾಗೂ 26 ಅರ್ಧ ಶತಕ ಬಾರಿಸಿದ್ದಾರೆ. ಮುಂಬೈ ಮೂಲದ ಮಾಡೆಲ್‍ಗೆ ಲೈಂಗಿಕ ಕಿರುಕುಳ ನೀಡಿ ಮದುವೆ ಆಗುವುದಾಗಿ ಮೋಸ ಮಾಡಿದ್ದಾರೆಂಬ ಆರೋಪ ಸಹ ಇವರ ಮೇಲೆ ಕೇಳಿ ಬಂದಿತ್ತು. ಆದರೆ, ಈ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದರು.