ನಾಗ್ಪುರ(ಮಹಾರಾಷ್ಟ್ರ):ಭಾರತೀಯ ವೇಗಿ ಉಮೇಶ್ ಯಾದವ್ ಅವರು ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಫ್ಲಾಟ್ ಖರೀದಿಸುವ ನೆಪದಲ್ಲಿ ಅವರ ಸ್ನೇಹಿತ ಮತ್ತು ಮ್ಯಾನೇಜರ್ 44 ಲಕ್ಷ ರೂಪಾಯಿ ವಂಚಿಸಿದ್ದಾರೆ. ನಾಗಪುರದ ನಿವಾಸಿ ಯಾದವ್ ನೀಡಿದ ದೂರಿನ ಮೇರೆಗೆ ಶೈಲೇಶ್ ಠಾಕ್ರೆ ವಿರುದ್ಧ ವಂಚನೆಗಾಗಿ ಪ್ರಕರಣ ದಾಖಲಿಸಲಾಗಿದೆ. ಠಾಕ್ರೆ (37) ಕೊರಾಡಿ ನಿವಾಸಿಯಾಗಿದ್ದು, ಯಾದವ್ ಅವರ ಸ್ನೇಹಿತರೂ ಆಗಿದ್ದಾರೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ. ಯಾದವ್ ಅವರು ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಆಯ್ಕೆಯಾದ ನಂತರ, ಅವರು ಜುಲೈ 15, 2014 ರಂದು ತಮ್ಮ ಸ್ನೇಹಿತ ಠಾಕ್ರೆ ಅವರನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಅವರು ನಿರುದ್ಯೋಗಿಯಾಗಿದ್ದರು. ಹೀಗಾಗಿ ಉಮೇಶ್ ಅವರು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ಠಾಕ್ರೆ ಕಾಲಕ್ರಮೇಣ ಯಾದವ್‌ನ ವಿಶ್ವಾಸ ಗಳಿಸಿದರು. ಉಮೇಶ್ ಯಾದವ್ ಅವರ ಎಲ್ಲಾ ಹಣಕಾಸು ವ್ಯವಹಾರಗಳನ್ನು ಅವರು ನಿಭಾಯಿಸಲು ಪ್ರಾರಂಭಿಸಿದರು. ಅವರು ಯಾದವ್ ಅವರ ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಯಾದವ್ ನಾಗ್ಪುರದಲ್ಲಿ ಭೂಮಿಯನ್ನು ಖರೀದಿಸಲು ಹುಡುಕುತ್ತಿದ್ದಾಗ ಠಾಕ್ರೆ ಅವರು ಫ್ಲಾಟ್ ನೋಡುವುದಾಗಿ ಯಾದವ್ಗೆ ತಿಳಿಸಿದ್ದರಂತೆ.
ಠಾಕ್ರೆ ಬಂಜರು ಪ್ರದೇಶದಲ್ಲಿ ಪ್ಲಾಟ್ ನೋಡಿ ಉಮೇಶ್ ಯಾದವ್ಗೆ ತಿಳಿಸಿದ್ದಾರೆ. ಅದರ ಖರೀದಿಗೆ ಯಾದವ್ ಅವರ ಬಳಿ 44 ಲಕ್ಷ ರೂ ಪಡೆದುಕೊಂಡಿದ್ದಾರೆ. ಉಮೇಶ್ ಯಾದವ್ ಠಾಕ್ರೆ ಅವರ ಬ್ಯಾಂಕ್ ಖಾತೆಗೆ 44 ಲಕ್ಷ ರೂ. ಠೇವಣಿ ಮಾಡಿದ್ದರು. ಆದರೆ, ಠಾಕ್ರೆ ಅವರು ಆ ಫ್ಲಾಟನ್ನು ತಮ್ಮ ಹೆಸರಿನಲ್ಲಿಯೇ ಖರೀದಿ ಮಾಡಿದ್ದಾರೆ. ಯಾದವ್ ವಂಚನೆಯ ಬಗ್ಗೆ ತಿಳಿದಾಗ, ಅವರು ಠಾಕ್ರೆ ಅವರನ್ನು ತಮ್ಮ ಹೆಸರಿಗೆ ಭೂಮಿಯ ಮಾಲೀಕತ್ವವನ್ನು ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಠಾಕ್ರೆ ಇದಕ್ಕೆ ಒಪ್ಪದೇ ನಿರಾಕರಿಸಿದ್ದಾರೆ. ಹಣವನ್ನಾದರೂ ಕೊಡುವಂತೆ ಯಾದವ್ ಬೇಡಿಕೆ ಇಟ್ಟಿದ್ದರಂತೆ. ಅದಕ್ಕೂ ಠಾಕ್ರೆ ಒಪ್ಪಿಲ್ಲದ ಕಾರಣ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.