ಕರ್ನಾಟಕ

karnataka

ETV Bharat / sports

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ನಿಧನ - ETV Bharath Karnataka

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಸೋಮವಾರ ನಿಧನರಾದರು.

Bishan Singh Bedi
Bishan Singh Bedi

By ETV Bharat Karnataka Team

Published : Oct 23, 2023, 5:02 PM IST

ಹೈದರಾಬಾದ್: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಲೆಜೆಂಡರಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ (77) ಅವರು ಸೋಮವಾರ ನಿಧನರಾಗಿದ್ದಾರೆ. ಇವರು ಪತ್ನಿ ಅಂಜು, ಮಗ ಅಂಗದ್ ಮತ್ತು ಸೊಸೆ ನೇಹಾ ಅವರನ್ನು ಅಗಲಿದ್ದಾರೆ.

1946ರಲ್ಲಿ ಅಮೃತಸರದಲ್ಲಿ ಜನಿಸಿದ ಬಿಶನ್ ಸಿಂಗ್ ಬೇಡಿ, ಭಾರತ ಕ್ರಿಕೆಟ್‌ ತಂಡದಲ್ಲಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 14 ಬಾರಿ ಐದು ವಿಕೆಟ್ ಪಡೆದ ವಿಶೇಷ ಸಾಧನೆ ಬೇಡಿ ಹೆಸರಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 266 ವಿಕೆಟ್​​ಗಳನ್ನು ಪಡೆದಿದ್ದಾರೆ. ಬೇಡಿ ಅವರು ಎರಪಳ್ಳಿ ಪ್ರಸನ್ನ, ಭಾಗವತ್ ಚಂದ್ರಶೇಖರ್ ಮತ್ತು ಶ್ರೀನಿವಾಸ್ ವೆಂಕಟರಾಘವನ್ ಅವರೊಂದಿಗೆ ಭಾರತೀಯ ಕ್ರಿಕೆಟ್‌ನ ಸುವರ್ಣ ಕಾಲಘಟ್ಟದಲ್ಲಿ ತ್ರಿವಳಿ ಸ್ಪಿನ್​ ಜೋಡಿಯಾಗಿದ್ದರು. 1966 ಮತ್ತು 1978ರ ನಡುವೆ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಭಾವಿ ಆಟಗಾರರಾಗಿದ್ದರು.

ಗಣ್ಯರಿಂದ ಸಂತಾಪ: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಎಕ್ಸ್​ ಖಾತೆಯಲ್ಲಿ, "ಭಾರತದ ಮಾಜಿ ಟೆಸ್ಟ್ ನಾಯಕ ಮತ್ತು ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನಕ್ಕೆ ಬಿಸಿಸಿಐ ಸಂತಾಪ ವ್ಯಕ್ತಪಡಿಸಿದೆ. ಈ ಸಮಯದಲ್ಲಿ ನಮ್ಮ ಆಲೋಚನೆ ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇರಲಿವೆ. ಆತ್ಮಕೆ ಶಾಂತಿ ಸಿಗಲಿ" ಎಂದು ಸಂತಾಪ ಸೂಚಿಸಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, "ಬಿಶನ್ ಸಿಂಗ್ ಬೇಡಿ ನಿಧನದ ಸುದ್ದಿ ಕೇಳಿ ದುಃಖವಾಯಿತು. ಭಾರತೀಯ ಕ್ರಿಕೆಟ್ ಇಂದು ಒಬ್ಬ ಐಕಾನ್ ಅನ್ನು ಕಳೆದುಕೊಂಡಿದೆ. ಬೇಡಿ ಅವರು ಕ್ರಿಕೆಟ್ ಯುಗವನ್ನು ವ್ಯಾಖ್ಯಾನಿಸಿದವರು. ಸ್ಪಿನ್ ಬೌಲಿಂಗ್​ನಿಂದ ಆಟದಲ್ಲಿ ಅಳಿಸಲಾಗದ ಛಾಪು ಮೂಡಿಸಿದವರು. ಈ ಸಮಯದಲ್ಲಿ ನನ್ನ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಪ್ರೀತಿಪಾತ್ರರ ಜತೆಯಲ್ಲಿರಲಿವೆ" ಎಂದು ತಿಳಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ, "ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಸ್ಪಿನ್ನರ್ ಮತ್ತು ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಜಿ ನಿಧನದಿಂದ ತೀವ್ರ ದುಃಖವಾಗಿದೆ. ಬೇಡಿ ಅವರು ಕ್ರಿಕೆಟ್ ಜಗತ್ತಿಗೆ ನೀಡಿದ ಕೊಡುಗೆಯ ಮೂಲಕ ಮಾತ್ರವಲ್ಲದೆ, ತಮ್ಮ ಸ್ಪಿನ್​ ಬೌಲಿಂಗ್​ನಿಂದ ಎಲ್ಲರ ನೆನಪಿನಲ್ಲಿ ಉಳಿಯುತ್ತಾರೆ" ಎಂದು ಕಂಬನಿ ಮಿಡಿದಿದ್ದಾರೆ.

ಬೇಡಿ ಅವರಿಗೆ 1970ರಲ್ಲಿ ಭಾರತ ಸರ್ಕಾರ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಸಿದ್ಧ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಗೌರವಾರ್ಥವಾಗಿ ಒಂದು ಸ್ಟ್ಯಾಂಡ್​ಗೆ ಅವರ ಹೆಸರನ್ನಿಟ್ಟಿದೆ. 1990ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಸಮಯದಲ್ಲಿ ಬೇಡಿ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದರು. ಮಣಿಂದರ್ ಸಿಂಗ್ ಮತ್ತು ಮುರಳಿ ಕಾರ್ತಿಕ್ ಅವರಂತಹ ಅನೇಕ ಪ್ರತಿಭಾವಂತ ಆಟಗಾರರಿಗೆ ಮಾರ್ಗದರ್ಶಕರೂ ಆಗಿದ್ದರು.

ಇದನ್ನೂ ಓದಿ:ರಾಜಸ್ಥಾನ್​ ರಾಯಲ್ಸ್​ಗೆ ಬೌಲಿಂಗ್​ ಕೋಚ್​ ಆಗಿ ನ್ಯೂಜಿಲೆಂಡ್​ ಮಾಜಿ ವೇಗಿ ಶೇನ್​ ಬಾಂಡ್​​ ನೇಮಕ

ABOUT THE AUTHOR

...view details