ನವದೆಹಲಿ:1960ರ ದಶಕದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗರಾಗಿದ್ದ ಸಲೀಂ ದುರಾನಿ ದೀರ್ಘಕಾಲಿನ ಕಾಯಿಲೆಯಿಂದ ಇಂದು ಬೆಳಗ್ಗೆ ನಿಧನ ಹೊಂದಿದರು. ಆಲ್ರೌಂಡರ್ ಕ್ರಿಕೆಟಿಗರಾಗಿದ್ದ ಇವರು ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. ದುರಾನಿ ಅವರಿಗೆ 88 ವರ್ಷ ವಯಸ್ಸಾಗಿತ್ತು.
ಸಲೀಂ ತಮ್ಮ ಕಿರಿಯ ಸಹೋದರ ಜಹಾಂಗೀರ್ ದುರಾನಿ ಅವರೊಂದಿಗೆ ಗುಜರಾತ್‌ನ ಜಾಮ್‌ನಗರದಲ್ಲಿ ವಾಸಿಸುತ್ತಿದ್ದರು. ಈ ವರ್ಷದ ಜನವರಿಯಲ್ಲಿ ಕುಸಿದು ಬಿದ್ದು ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಪ್ರಾಕ್ಸಿಮಲ್ ತೊಡೆ ಎಲುಬಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದು ಅವರನ್ನು ಬಾಧಿಸುತ್ತಿತ್ತು.
ಕಾಬೂಲ್ ಮೂಲದ ದುರಾನಿ ಭಾರತ ತಂಡದಲ್ಲಿ ಬ್ಯಾಟ್ ಮತ್ತು ಬೌಲಿಂಗ್ನಿಂದ ಹೆಸರು ಮಾಡಿದ್ದರು. ಎಡಗೈ ಬೌಲರ್ ಆಗಿದ್ದ ಸಲೀಂ, ಟೀಂ ಇಂಡಿಯಾ ಪರವಾಗಿ 29 ಟೆಸ್ಟ್‌ಗಳನ್ನು ಆಡಿದ್ದಾರೆ. 1961- 62 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೆಸ್ಟ್ ಸರಣಿಯ ಐತಿಹಾಸಿಕ ಗೆಲುವಿನಲ್ಲಿ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಸಲೀಂ ಕ್ರಮವಾಗಿ 8 ಮತ್ತು 10 ವಿಕೆಟ್‌ಗಳನ್ನು ಪಡೆದಿದ್ದರು. ಇದು ಭಾರತ 2-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು ಕಾರಣವಾಗಿತ್ತು.
ದೇಶದ ಪರವಾಗಿ ಆಡಿದ 50 ಇನ್ನಿಂಗ್ಸ್ ಪೈಕಿ 7 ಅರ್ಧಶತಕ, ಒಂದು ಶತಕ ಬಾರಿಸಿರುವ ಸಲೀಂ ದುರಾನಿ 1,202 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ವಿಜಯದ ಒಂದು ದಶಕದ ನಂತರ, ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸಿದ್ದರು. ಅಂದಿನ ದೈತ್ಯ ದಂತಕಥೆಗಳಾದ ಕ್ಲೈವ್ ಲಾಯ್ಡ್ ಮತ್ತು ಸರ್ ಗಾರ್ಫೀಲ್ಡ್ ಸೋಬರ್ಸ್ ಇಬ್ಬರನ್ನೂ ಪಂದ್ಯದಲ್ಲಿ ಔಟ್ ಮಾಡಿದ್ದರು.