ಫ್ಲೋರಿಡಾ (ಅಮೆರಿಕ): ಶುಭ್‌ಮನ್ ಗಿಲ್ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಹೆಚ್ಚು ಶೈನ್ ಆಗಿರಲಿಲ್ಲ. ಟೆಸ್ಟ್ ಸರಣಿಯ ಮೂರೂ ಇನ್ನಿಂಗ್ಸ್ನಲ್ಲಿ ಮೂರನೇ ಸ್ಥಾನದಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿರಲಿಲ್ಲ. ಏಕದಿನ ಸರಣಿಯಲ್ಲೂ ಕೊನೆಯ ಪಂದ್ಯದಲ್ಲಿ 85 ರನ್‌ಗಳಿಸಿದ್ದು ಬಿಟ್ಟರೆ, ಮಿಕ್ಕೆರಡೂ ಪಂದ್ಯಗಳಲ್ಲಿ ವೈಫಲ್ಯ ಕಂಡರು. ಟಿ20ಯಲ್ಲೂ ಮೂರು ಪಂದ್ಯದಲ್ಲಿ ಎರಡಂಕಿ ತಲುಪಲಿಲ್ಲ. ಆದರೆ ನಾಲ್ಕನೇ ಪಂದ್ಯದಲ್ಲಿ 47 ಎಸೆತಗಳಲ್ಲಿ 77 ರನ್ ಗಳಿಸಿ ಕಮ್ಬ್ಯಾಕ್ ಮಾಡಿದ್ದಾರೆ.
ದೊಡ್ಡ ಮೊತ್ತ ಕಲೆ ಹಾಕಿದ್ದರ ಬಗ್ಗೆ ಗಿಲ್ ಬಿಸಿಸಿಐ ಟಿವಿಯಲ್ಲಿ ಮಾತನಾಡಿದರು. ಮೊದಲ ಮೂರು ಟಿ20ಗಳಲ್ಲಿ 3, 7 ಮತ್ತು 6 ರಲ್ಲಿ ಔಟಾಗಿದ್ದು, ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದೆ. ಮೊದಲ ಪಂದ್ಯಗಳ ತಪ್ಪು ತಿದ್ದಿಕೊಂಡಿದ್ದೇನೆ ಎಂದು ಅರ್ಷ್‌ದೀಪ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಪಂದ್ಯದ ನಂತರ ಅರ್ಷ್‌ದೀಪ್ ಸಿಂಗ್ ಮತ್ತು ಶುಭಮನ್ ಗಿಲ್ 3 ನಿಮಿಷಗಳ ಚಿಟ್ಚಾಟ್ ಮಾಡಿದ್ದಾರೆ. ಇಬ್ಬರೂ ತಮ್ಮ ಆಟದ ಬಗ್ಗೆ ಮಾತಾಡಿಕೊಂಡರು. ಅರ್ಷ್‌ದೀಪ್ ಸಿಂಗ್ ಕುಟುಂಬದವರು ನಿನ್ನೆ ಪಂದ್ಯ ವೀಕ್ಷಣೆಗೆ ಬಂದಿದ್ದರು. ಹೀಗಾಗಿ ಕುಟುಂಬದವರ ಮುಂದೆ ಉತ್ತಮ ಪ್ರದರ್ಶನ ನೀಡಲೇಬೇಕು ಎಂಬ ಆಸೆ ಇತ್ತು ಎಂದು ಹೇಳಿಕೊಂಡಿದ್ದಾರೆ. "ಕುಟುಂಬದವರು ಭೇಟಿ ನೀಡಿ ಅಚ್ಚರಿ ಉಂಟುಮಾಡಿದರು. ಮೊದಲಿಗೆ ಮಾಡಿದ ಬೌನ್ಸ್ ಕೆಲಸ ಮಾಡಿತು. ತಂಡಕ್ಕೆ ಮೇಯರ್ಸ್ ಅವರ ಮೊದಲ ವಿಕೆಟ್ ಸಿಕ್ಕಿತು. ನಂತರ ಅದೇ ಮೂಡ್ನಲ್ಲಿ ಮಿಕ್ಕೆರಡು ವಿಕೆಟ್ ಕಬಳಿಸಿದೆ" ಎಂದರು.