ಮುಂಬೈ :ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಅವರಂತಹ ಕೋಚಿಂಗ್ನಲ್ಲಿ ಯುವ ಆಟಗಾರರಿಂದ ಒಳ್ಳೆಯ ಆಟವನ್ನು ಹೊರತರಲು ಗಮನ ಹರಿಸುವೆ ಎಂದು ಭಾರತ ತಂಡದ ನಾಯಕ ಶಿಖರ್ ಧವನ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ.
ಈ ತಂಡಕ್ಕೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಹಾಗೂ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ತಂಡದಲ್ಲಿ ಧವನ್, ಭುವನೇಶ್ವರ್, ಹಾರ್ದಿಕ್ ಪಾಂಡ್ಯ, ಚಹಾಲ್, ಕುಲ್ದೀಪ್‌ರಂತಹ ಅನುಭವಿಗಳ ಜೊತೆಗೆ ಹಲವಾರು ಯುವ ಆಟಗಾರರು ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಈ ಯುವ ಆಟಗಾರರಿಂದ ಅತ್ಯುತ್ತಮ ಆಟವನ್ನು ಹೊರ ತರುವುದುಕ್ಕೆ ತಾವೂ ಸಾಧ್ಯವಾದಷ್ಟು ಗಮನ ಹರಿಸುವುದಾಗಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ಭಾರತ ತಂಡದ ನಾಯಕನಾಗಿರುವುದು ನನಗೆ ದೊಡ್ಡ ಗೌರವ ಮತ್ತು ಈ ತಂಡವನ್ನು ಮುನ್ನಡೆಸುವುದಕ್ಕೆ ಎದುರು ನೋಡುತ್ತಿದ್ದೇನೆ. ನಾವು ಒಂದು ತಂಡವಾಗಿ ರಾಹುಲ್ ಭಯ್ಯಾ ಜೊತೆ ಕೆಲಸ ಮಾಡಲಿದ್ದೇವೆ" ಎಂದು ಧವನ್ ಗೋಷ್ಠಿಯಲ್ಲಿ ಹೇಳಿದ್ದಾರೆ.