ಕೊಲಂಬೊ:ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲಿ ಈ ವರ್ಷ ಏಷ್ಯಾಕಪ್ನ್ನು ಆಯೋಜಿಸಲಾಗಿತ್ತು. ಆದರೆ ಫೈನಲ್ ಪಂದ್ಯ ಟಿ20 ಪಂದ್ಯದಷ್ಟೂ ಓವರ್ ಆಡದೇ ಫಲಿತಾಂಶ ಕಂಡಿತ್ತು. ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಿತ್ತು. ಪಂದ್ಯ ಗೆಲ್ಲುವ ಫೇವ್ರೇಟ್ ತಂಡ ಭಾರತವೇ ಆಗಿದ್ದರೂ, ಭಾನುವಾರ ನಡೆದ ಚಮತ್ಕಾರಿ ಜಯ ಟೀಮ್ ಇಂಡಿಯಾದ್ದಾಗುತ್ತದೆ ಎಂದು ಕನಸು-ನನಸಿಲ್ಲಿ ಯಾರೊಬ್ಬರು ಅಂದಾಜಿಸಿರಲು ಸಾಧ್ಯವಿಲ್ಲ.
ಆದರೆ ಏಷ್ಯಾಕಪ್ 2023ರ ಫೈನಲ್‌ನಲ್ಲಿ ಭಾರತದ ವಿರುದ್ಧ ಶ್ರೀಲಂಕಾದ ಹೀನಾಯ ಸೋಲಿನಿಂದ ನಿರಾಶೆಗೊಂಡಿರುವ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ದುಷ್ಕೃತ್ಯ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿ ಪೊಲೀಸ್ ತನಿಖೆಗೆ ಒತ್ತಾಯಿಸಿದ್ದಾರೆ. ಶ್ರೀಲಂಕಾ ಕ್ರಿಕೆಟಿಗರ ಪ್ರದರ್ಶನ ಮತ್ತು ವಿಶೇಷವಾಗಿ ಕಡಿಮೆ ರನ್‌ಗೆ ಆಲ್ಔಟ್ ಆಗಿರುವುದರ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಆರೋಪಿಸಿ 'ಲಂಚ, ಭ್ರಷ್ಟಾಚಾರ ಮತ್ತು ತ್ಯಾಜ್ಯದ ವಿರುದ್ಧ ನಾಗರಿಕ ಶಕ್ತಿ' ಎಂಬ ನಾಗರಿಕ ಹಕ್ಕುಗಳ ಸಂಘಟನೆಯು ಕೊಲಂಬೊದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ದೂರು ದಾಖಲಿಸಿದೆ.
ಶ್ರೀಲಂಕಾ ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಶ್ರೀಲಂಕಾ ತಂಡ ಕೇವಲ 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಮ್ಯಾಚ್ ಫಿಕ್ಸಿಂಗ್ ಗಂಭೀರ ಶಂಕೆ ವ್ಯಕ್ತವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿ.ಕಾಮಂತ ತುಷಾರ ದೂರಿದ್ದಾರೆ. ತುಷಾರ,'15 ಓವರ್‌ಗಳಲ್ಲಿ 50 ರನ್ ಗಳಿಸಲಾಯಿತು. ಇದು 50 ಓವರ್‌ಗಳ ಆಟದಲ್ಲಿ ಪ್ರತಿ ಓವರ್‌ಗೆ ಒಂದು ರನ್ ಗುರಿ ನೀಡಿದಂತೆ. ಆ ಪಂದ್ಯದಲ್ಲಿ ಕ್ರಿಕೆಟಿಗರು ಆಡುವ ರೀತಿ ಬಗ್ಗೆ ಅನುಮಾನವಿದೆ. ಮೈದಾನ ಪ್ರವೇಶಿಸಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾಗಲೇ ಪಂದ್ಯ ಮುಗಿದಿತ್ತು. ಶಾಲಾ ತಂಡ ಆಡಿದ್ದರೂ ಅಂಕಪಟ್ಟಿಯಲ್ಲಿ ಸಾಕಷ್ಟು ರನ್ ಬರುತ್ತಿತ್ತು' ಎಂದು ಆರೋಪಿಸಿದ್ದಾರೆ.