ಮುಂಬೈ:ಎಂ.ಎಸ್.ಧೋನಿ ಎಂದರೆ ಮೊದಲಿಗೆ ಬರೋದೇ ಅವರ ಗೇಮ್ ಫಿನಿಷಿಂಗ್. ಆದರೆ ಅಷ್ಟೇ ಮಹತ್ವ ಅವರ ನಾಯಕತ್ವಕ್ಕೂ ಇತ್ತು. ಅವರ ಚಾಣಾಕ್ಷ ನಾಯಕತ್ವದಿಂದಲೇ ಕೆಲವು ಮಹತ್ವದ ಟೂರ್ನಿಗಳು ಭಾರತದ ಪಾಲಾದವು ಎನ್ನುವುದರಲ್ಲಿ ಎರಡು ಮಾತಿಲ್ಲ.
ಧೋನಿ ನಾಯಕತ್ವದಲ್ಲಿ ಭಾರತ ತಂಡ ಅನೇಕ ದಿಗ್ವಿಜಯಗಳನ್ನೇ ಸಾಧಿಸಿದೆ. ಆಸ್ಟ್ರೇಲಿಯಾದಲ್ಲಿ ಕ್ಲೀನ್ ಸ್ವೀಪ್ ಸಾಧನೆ, ಐಸಿಸಿ ಆಯೋಜಿಸುವ ಎಲ್ಲ ಟ್ರೋಫಿಗಳನ್ನು ಭಾರತಕ್ಕೆ ತಂದುಕೊಟ್ಟ ಶ್ರೇಯ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸಿದರಲ್ಲದೇ, ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ರಾಂಚಿ ಕ್ರಿಕೆಟಿಗನಿಗೆ ಸಲ್ಲುತ್ತದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಇದೀಗ 40ನೇ ವಸಂತಕ್ಕೆ ಕಾಲಿಡುತ್ತಿದ್ದು, ಭಾರತ ಕ್ರಿಕೆಟ್ನಲ್ಲಿ ನಾಯಕನಾಗಿ ಅವರು ತೆಗೆದುಕೊಂಡ ಪ್ರಮುಖ 5 ನಿರ್ಧಾರಗಳ ಹೇಗಿದ್ದವು?, ಅವು ಹೇಗೆ ಪಂದ್ಯದ ಗತಿ ಬದಲಿಸಿದವು ಎಂದು ತಿಳಿದುಕೊಳ್ಳೋಣ..
1. 2007 ರವಿಶ್ವಕಪ್ನಲ್ಲಿ ಅನನುಭವಿ ಜೋಗಿಂದರ್ ಶರ್ಮಾಗೆ ಕೊನೆಯ ಓವರ್
ಟಿ-20 ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಚೊಚ್ಚಲ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿಯಾಗಿತ್ತು ಪಾಕಿಸ್ತಾನ. ಭಾರತ ನೀಡಿದ್ದ ಗುರಿಯನ್ನು ಬೆನ್ನತ್ತಿದ್ದ ಪಾಕ್ ತಂಡಕ್ಕೆ ಅಂತಿಮ ಓವರ್ನಲ್ಲಿ 13 ರನ್ಗಳ ಅವಶ್ಯಕತೆ ಇತ್ತು. ಆ ವೇಳೆಗಾಗಲೇ ಪಾಕ್ ತನ್ನ 9 ವಿಕೆಟ್ ಕಳೆದುಕೊಂಡಿತ್ತಾದರೂ ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್ನಲ್ಲಿದ್ದರು.
ಧೋನಿ ಮುಂದೆ ಭಜ್ಜಿಯಂತಹ ಅನುಭವಿಯ ಆಯ್ಕೆಗಳಿದ್ದರೂ ಅವರು ಅನನುಭವಿ ಜೋಗಿಂದರ್ ಶರ್ಮಾಗೆ ಬೌಲಿಂಗ್ ನೀಡಿದ್ದರು. ಮೊದಲೆರಡು ಎಸೆತದಲ್ಲಿ ಸಿಕ್ಸರ್, ವೈಡ್ ನೀಡಿದ್ದ ಶರ್ಮಾ ನಂತರದ ಎಸೆತದಲ್ಲಿ ಮಿಸ್ಬಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭಾರತ ವಿಶ್ವಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಇದನ್ನೂ ಓದಿರಿ: ದ್ರಾವಿಡ್ ಕೋಚ್ ಆಗಿರುವುದು ನಮ್ಮ ಅದೃಷ್ಟ.. ಅವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟ ಎಂದ ಭುವಿ!
2. 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಬೌಲರ್ಗಳಿಗೆ ನೀಡಿದ ಸೂಚನೆ
ಧೋನಿ ನಾಯಕನಾಗಿ ಆಯ್ಕೆಯಾಗಿದ್ದ 3ನೇ ಟೆಸ್ಟ್ನಲ್ಲಿ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಧೋನಿ ಬಹಳಷ್ಟು ಟೀಕೆಗೆ ಗುರಿಯಾದರು. ಆದರೆ ಅದರ ಫಲಿತಾಂಶ ಧೋನಿ ಪರವೇ ಬಂದಿತ್ತು. 2008ರ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಮೂರು ಟೆಸ್ಟ್ಗಳಲ್ಲಿ ಒಂದು ಟೆಸ್ಟ್ ಗೆದ್ದು, ಎರಡರಲ್ಲಿ ಡ್ರಾ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಅಂತಿಮ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 441 ರನ್ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಎರಡನೇ ದಿನದಂತ್ಯಕ್ಕೆ 3.9 ರನ್ರೇಟ್ನಲ್ಲಿ 189ಕ್ಕೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು.
ಮೂರನೇ ದಿನ ಧೋನಿ ಬೌಲರ್ಗಳಿಗೆ, ಔಟ್ಸೈಡ್ನಿಂದ ಬೌಲಿಂಗ್ ಮಾಡಲು ಸೂಚನೆ ನೀಡುತ್ತಿದ್ದರು. ಈ ನಿರ್ಧಾರದಿಂದ ಬ್ಯಾಟ್ಸ್ಮನ್ಗಳಿಗೆ ಅಟ್ಯಾಕ್ ಮಾಡಲು ಸುಲಭವಾಗುತ್ತಿದೆ ಎಂದು ಕಾಮೆಂಟೇಟರ್ಗಳು ದೂರಿದ್ದಲ್ಲದೇ, ಡ್ರಾ ಸಾಧಿಸಿ ಸರಣಿ ಗೆಲ್ಲುವುದನ್ನು ಬಿಟ್ಟು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಧೋನಿ ಟೀಕಿಸಿದ್ದರು.ಆದರೆ, ಎಲ್ಲರ ಆಲೋಚನೆ ತಲೆಕೆಳಗಾಗಿತ್ತು. ಆಸ್ಟ್ರೇಲಿಯ ಹಿಂದಿನ ಮೊತ್ತಕ್ಕೆ 166ರನ್ ಸೇರಿಸಿ 355 ರನ್ಗಳಿಗೆ ಸರ್ವಪತನ ಕಂಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಸೆಹ್ವಾಗ್ರ 92 ರನ್ ಹಾಗೂ ಸ್ವತಃ ಧೋನಿಯೇ ಅಬ್ಬರದ ಅರ್ಧಶತಕ ಸಿಡಿಸಿ ಆಸ್ಟ್ರೇಲಿಯಾ ತಂಡಕ್ಕೆ 382 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನೆಟ್ಟಿದ ಆಸ್ಟ್ರೇಲಿಯಾ 210 ರನ್ಗಳಿಗೆ ಆಲೌಟ್ ಆಗುವ ಮೂಲಕ 172 ರನ್ಗಳಿಂದ ಸೋಲನುಭವಿಸಿತ್ತು. ಭಾರತ ತಂಡ 2-0ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ಸಾಧಿಸಿತ್ತು.