ಢಾಕಾ(ಬಾಂಗ್ಲಾದೇಶ):ಮಳೆ ಕಾಟದ ಕ್ರಿಕೆಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಿನ ಬಳಿಕ ಇಂದಿನಿಂದ ಆರಂಭವಾಗುವ 3 ಪಂದ್ಯಗಳ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ-ಬಾಂಗ್ಲಾದೇಶ ಪರಸ್ಪರ ಸೆಣಸಾಡಲಿವೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ತಂಡಕ್ಕೆ ವಾಪಸ್ ಆಗಿದ್ದು, ಬಲ ಹೆಚ್ಚಿಸಿದೆ.
ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಆಟಗಾರರಿಗೆ ಹೊಣೆಗಾರಿಕೆ ಮತ್ತು ಆಯಾ ಕ್ರಮಾಂಕಕ್ಕೆ ಬಲ ನೀಡಲು ಸಜ್ಜು ಮಾಡಲಾಗುತ್ತಿದೆ. ಬ್ಯಾಟಿಂಗ್ಗೆ ನೆರವಾಗಲಿರುವ ಢಾಕಾದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ತಂಡದ ಸಂಯೋಜನೆಗೆ ಸರಣಿ ನೆರವು:ಭಾರತ ಕ್ರಿಕೆಟ್ ತಂಡ ನಿರಂತರ ಕ್ರಿಕೆಟ್ ಆಡುತ್ತಿದ್ದರೂ ತಂಡದ ಸಂಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಈ ವರ್ಷ ಆಡಿರುವ 27 ಏಕದಿನ ಪಂದ್ಯದಲ್ಲಿ ಶಿಖರ್ ಧವನ್ 25 ಪಂದ್ಯಗಳನ್ನಾಡಿದರೆ, ಉಳಿದವರು 10 ಪಂದ್ಯಗಳಲ್ಲಿ ಮಾತ್ರ ಭಾಗಿಯಾಗಿದ್ದಾರೆ. ಫಾರ್ಮ್ಗೆ ಬಂದಿರುವ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ತಮ್ಮ ಖದರ್ ತೋರಿಸಬೇಕಿದೆ.
ನ್ಯೂಜಿಲ್ಯಾಂಡ್ ಸರಣಿಯಲ್ಲಿ ಬ್ಯಾಟರ್ ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದು ಈ ಸರಣಿಯಲ್ಲೇ ನಿರ್ಣಯಿಸಬೇಕಿದೆ. ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯುವ ಕಾರಣ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಿದೆ.
ಬೌಲಿಂಗ್ ವಿಭಾಗಕ್ಕೆ ಬೇಕಿದೆ ಸರ್ಜರಿ:ತಂಡದ ಮುಂಚೂಣಿ ಬೌಲರ್ ಜಸ್ಪ್ರೀತ್ ಬೂಮ್ರಾ ಗಾಯದಿಂದ ಚೇತರಿಸಿಕೊಳ್ಳದಿರುವುದು ಬೌಲಿಂಗ್ ಪಡೆ ಸತ್ವ ಕಳೆದುಕೊಂಡಿದೆ. ಈ ಹಿರಿಯ ವೇಗಿ ಸರಣಿ ಆರಂಭಕ್ಕೂ ಮೊದಲು ಗಾಯಗೊಂಡು ಹೊರಬಿದ್ದಿದ್ದಾರೆ. ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಇನ್ನುಳಿದಂತೆ ವೇಗಿ ಉಮ್ರಾನ್ ಮಲಿಕ್, ಮೊಹಮ್ಮದ್ ಶಮಿ ಬದಲಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರೂ ಆಡುವ ಹನ್ನೊಂದರಲ್ಲಿ ಅವಕಾಶ ಪಡೆಯುವುದು ಡೌಟ್.