ನವದೆಹಲಿ: ಏಕದಿನ ವಿಶ್ವಕಪ್ ಮೇಲೆ ಕಾಲಿಟ್ಟ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ವಿರುದ್ಧ ಭಾರತದಲ್ಲಿ ಎಫ್‌ಐಆರ್ ದಾಖಲಾಗಿದೆ. ಉತ್ತರ ಪ್ರದೇಶದ ಅಲಿಘರ್‌ನ ಆರ್‌ಟಿಐ ಕಾರ್ಯಕರ್ತ ಪಂಡಿತ್ ಕೇಶವ್ ನೀಡಿದ ದೂರಿನ ಮೇಲೆ ದೆಹಲಿ ಗೇಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಶ್ವಕಪ್ ಮೇಲೆ ಕಾಲುಗಳ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಿಚೆಲ್ ಮಾರ್ಷ್ ಟ್ರೋಫಿಯನ್ನು ಅವಮಾನಿಸಿದ್ದಾರೆ. 140 ಕೋಟಿ ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೇಶವ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾ ಹಿರಿಯ ವೇಗಿ ಶಮಿ ಕೂಡ ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ್ದರು. "ಮಿಚೆಲ್ ಹಾಗೆ ಮಾಡಿದ್ದು ನನಗೆ ತುಂಬಾ ನೋವುಂಟು ಮಾಡಿದೆ. ವಿಶ್ವಕಪ್‌ನಲ್ಲಿ ಟ್ರೋಫಿಗಾಗಿ ಹಲವು ತಂಡಗಳು ಸೆಣಸಾಡಿದ್ದವು. ಅಂತಹ ಟ್ರೋಫಿಯನ್ನು ತಲೆಯ ಮೇಲೆ ಹೊತ್ತು ಸಾಗಬೇಕು. ಆದ್ರೆ ಕಪ್ ಮೇಲೆ ಕಾಲಿಟ್ಟಿರುವುದು ಇಷ್ಟವಿಲ್ಲ" ಎಂದು ಶಮಿ ಬೇಸರ ವ್ಯಕ್ತಪಡಿಸಿದ್ದರು.