ಅದು 2013 ರ ಚಾಂಪಿಯನ್ ಟ್ರೋಫಿ. ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ಐಸಿಸಿಯ ಮತ್ತೊಂದು ಟ್ರೋಫಿ ಗೆದ್ದಿತ್ತು. ಅದೇ ಕೊನೆ, ಅದ್ಯಾಕೋ ಭಾರತಕ್ಕೂ ಐಸಿಸಿಯ ಟ್ರೋಫಿಗಳಿಗೂ ಎಣ್ಣೆ- ಸೀಗೆಕಾಯಿ ಸಂಬಂಧ. ಅಂದಿನಿಂದ ಅದೆಷ್ಟೇ ಪ್ರಯತ್ನಪಟ್ಟರೂ ಗೆಲುವು ಅನ್ನೋದು ಮರೀಚಿಕೆಯಾಗಿದೆ. ಮೊನ್ನೆಯಷ್ಟೇ ಮುಗಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೇರಿದಂತೆ ಕಳೆದ 10 ವರ್ಷಗಳಲ್ಲಿ ಆಡಿದ 8 ಐಸಿಸಿ ಟೂರ್ನಿಗಳಲ್ಲಿ ತಲಾ 4 ಸೆಮಿಫೈನಲ್, ಫೈನಲ್ನಲ್ಲಿ ಸೋತು ಸುಣ್ಣವಾಗಿದೆ. ಇದೆಲ್ಲಾ ನೋಡಿದರೆ ಭಾರತ ಕ್ರಿಕೆಟ್ಗೆ ಫೈನಲ್ ಫೋಬಿಯಾ ಕಾಡುತ್ತಿದೆ ಎಂದೆನಿಸುತ್ತದೆ.
ನಾಯಕತ್ವ ವೈಫಲ್ಯವೋ ಅಥವಾ ತಂಡದ ಅಮತೋಲನವೋ ಒಟ್ಟಿನಲ್ಲಿ ಭಾರತ ಸತತ 8 ಐಸಿಸಿ ಟ್ರೋಫಿಗಳನ್ನು ಕಳೆದುಕೊಂಡಿದೆ. ಅದು ಸಹ 4 ಸೆಮಿ-ಫೈನಲ್ ಮತ್ತು 4 ಫೈನಲ್ನಲ್ಲಿ ಸೋಲುಕಂಡಿದ್ದು ದಕ್ಷಿಣ ಆಫ್ರಿಕಾದ ರೀತಿಯಲ್ಲಿ ಚೋಕರ್ಸ್ ಎಂಬ ಹಣೆ ಪಟ್ಟಿಯನ್ನು ಭಾರತಕ್ಕೂ ಅಂಟಿತೆ ಎಂಬ ಪ್ರಶ್ನೆ ಕಾಡುತ್ತಿದೆ.
2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಇಂಗ್ಲೆಂಡ್ ನೆಲದಲ್ಲೇ ಆಂಗ್ಲರನ್ನು ಬಗ್ಗು ಬಡಿದು ಆಗ ಐಸಿಸಿ ನಡೆಸುತ್ತಿದ್ದ ಮೂರು ಕಪ್ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಒಳಗಾಗಿತ್ತು. ಇದಕ್ಕೂ ಮೊದಲು ಧೋನಿ ನಾಯಕರಾಗಿ ಭಾರತಕ್ಕೆ 2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್ನ್ನು ಗೆಲ್ಲಿಸಿಕೊಟ್ಟಿದ್ದರು. 2007ರಲ್ಲಿ ಮಾಹಿಯ ಮುಂದಾಳತ್ವದಲ್ಲಿ ಹೊಸ ಯುವಕರ ತಂಡವನ್ನು ಬಿಸಿಸಿಐ ಚೊಚ್ಚಲ ಟಿ20 ವಿಶ್ವಕಪ್ಗೆ ಕಣಕ್ಕಿಳಿಸಿ ಯಶಸ್ಸು ಕಂಡಿತ್ತು. ನಂತರದ ವರ್ಷದಲ್ಲಿ ಭಾರತ ಮೂರು ಮಾದರಿಯ ಕ್ರಿಕೆಟ್ನಲ್ಲಿ ಐಸಿಸಿಯ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿತ್ತು. ನಂತರ ಧೋನಿಯ ನಾಯಕತ್ವದಲ್ಲೇ ನಡೆದ 2014 ಟಿ20 ವಿಶ್ವಕಪ್ ಮತ್ತು 2015 ರಲ್ಲಿ ವಿಶ್ವಕಪ್ನಲ್ಲೂ ಭಾರತ ಮಹತ್ವದ ಘಟ್ಟದಲ್ಲಿ ಪಂದ್ಯವನ್ನು ಕಳೆದುಕೊಂಡಿತು.
2013ರ ವರೆಗೆ ಧೋನಿ ನಾಕತ್ವದಲ್ಲಿ ಭಾರತ ತಂಡ ಸುವರ್ಣ ಯುಗವನ್ನೇ ಕಂಡಿತ್ತು. ಸತತ ಎಲ್ಲಾ ಸೀರೀಸ್ಗಳನ್ನು ಗೆದ್ದು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಆದರೆ ನಂತರ ಮಂಕಾದ ತಂಡ ಮಹತ್ವದ ಪಂದ್ಯಗಳಲ್ಲಿ ಎಡವುತ್ತಿದ್ದು, ಚೋಕರ್ಸ್ ಆಗುತ್ತಿದ್ದಾರೆ.