ಬೆಂಗಳೂರು: ಭಾರತದ ಸರಣಿ ಗೆಲುವಿನ ಆಸೆಗೆ ವರುಣ ಅಡ್ಡಿ ಪಡಿಸಿದ್ದಾನೆ. ನಗರದಲ್ಲಿ ಸುರಿದ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡ ನಡುವಿನ ಐದನೇ ಟಿ20 ಪಂದ್ಯ ರದ್ದು ಮಾಡಲಾಯಿತು. ಈ ಮೂಲಕ ಸರಣಿಯು 2-2ರಲ್ಲಿ ಸಮಬಲವಾಯಿತು. ರೋಚಕ ಸರಣಿಯು ನಿರಾಶಾದಾಯಕ ಅಂತ್ಯ ಕಂಡಿತು.
ಬೆಂಗಳೂರಿನಲ್ಲಿ ಮಳೆ ಸುರಿದ ಪರಿಣಾಮವಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಿರಲಿಲ್ಲ. ಬಳಿಕ ಇಡೀ ಪಿಚ್ ಅನ್ನು ಹೊದಿಕೆಯಿಂದ ಮುಚ್ಚಲಾಗಿತ್ತು. ಹವಾಮಾನ ಇಲಾಖೆಯೂ ಸಹ ಮಳೆಯ ಬಗ್ಗೆ ಮುನ್ಸೂಚನೆ ನೀಡಿತ್ತು. ಸ್ವಲ್ಪ ಸಮಯದ ಬಳಿಕ ಮಳೆ ನಿಂತಾಗ ಅಂಪೈರ್ ಮೈದಾನದ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ರು. ಮೈದಾನದಿಂದ ನೀರನ್ನು ಹೊರತೆಗೆದ ಬಳಿಕ ಪಂದ್ಯ ರಾತ್ರಿ 7.50ಕ್ಕೆ ಆರಂಭವಾಯಿತು. ಈ ವೇಳೆ ಉಭಯ ತಂಡಗಳಿಗೆ ತಲಾ ಒಂದೊಂದು ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು.
ಓದಿ:IND vs SA 5th T20: ಕೊನೆಯ ಪಂದ್ಯದಲ್ಲೂ ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ಕೆ, ಗೆದ್ದವರಿಗೆ ಸರಣಿ
ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ದಕ್ಷಿಣ ಆಫ್ರಿಕಾ ಪರ ನಾಯಕ ಕೇಶವ್ ಮಹಾರಾಜ್ ಬೌಲಿಂಗ್ ಆರಂಭಿಸಿದ್ದರು. ಇತ್ತ ಭಾರತ ತಂಡದ ಪರ ಇಶಾನ್ ಕಿಶನ್ ಮತ್ತು ರಿತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕೇಶವ್ ಮಹಾರಾಜ್ ಮೊದಲ ಓವರ್‌ನಲ್ಲಿ 16 ರನ್ ನೀಡಿದರು. ನಾಯಕನ ಈ ಓವರ್ ಅತ್ಯಂತ ದುಬಾರಿ ಎನಿಸಿತ್ತು. ಲುಂಗಿ ಎನ್‌ಗಿಡಿ ಎರಡನೇ ಓವರ್‌ನಲ್ಲಿಯೇ ಇಶಾನ್ ಕಿಶನ್ರನ್ನು ಬೌಲ್ಡ್ ಮಾಡಿದರು. ಕಿಶನ್ 7 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಕಗಿಸೊ ರಬಾಡ ಮೂರನೇ ಓವರ್‌ನಲ್ಲಿ ಕೇವಲ ಐದು ರನ್ ನೀಡಿದರು. ಎನ್‌ಗಿಡಿ ತಮ್ಮ ಎರಡನೇ ಓವರ್‌ನಲ್ಲಿ ರಿತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ಗಾಯಕ್ವಾಡ್ 12 ಎಸೆತಗಳಲ್ಲಿ 10 ರನ್ ಗಳಿಸಿ ಪೆವಿಲಿಯನ್‌ಗೆ ವಾಪಾಸ್ ಆದರು. 21 ಎಸೆತಗಳ ಬಳಿಕ ಒಮ್ಮೆಲೆ ಮಳೆ ಸುರಿಯಲಾರಂಭಿಸಿದ್ದು, ಪಂದ್ಯವನ್ನು ನಿಲ್ಲಿಸಲಾಗಿತ್ತು. 10 ಗಂಟೆಯ ನಂತರವೂ ಮಳೆ ಮುಂದುವರಿಯುತ್ತಿತ್ತು. ಮಳೆ ನಿಲ್ಲದ ಕಾರಣ ಬಿಸಿಸಿಐ ಅಧಿಕಾರಿಗಳು ಪಂದ್ಯ ರದ್ದುಪಡಿಸಿದರು. ಸರಣಿಯು 2-2ರಲ್ಲಿ ಸಮಬಲವಾಯಿತು. ರೋಚಕ ಸರಣಿಯು ನಿರಾಶಾದಾಯಕವಾಗಿ ಅಂತ್ಯ ಕಂಡಿತು.