ನವದೆಹಲಿ: ಭಾರತ ಕ್ರಿಕೆಟ್ ತಂಡದ ಪರ ಎಲ್ಲಾ ಮೂರು ಮಾದರಿಯಲ್ಲೂ ಆಡುವ ಹಾಗೂ ಎಲ್ಲಾ ಮೂರು ಮಾದರಿಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದಿರುವ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಈಗ ಭಾರತದ ಪರ ಆಡುತ್ತಿರುವುದು ಅಪರೂಪ ಆಗಿದೆ. ಶೀಘ್ರದಲ್ಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಭಾರತ ತಂಡದ ಆಯ್ಕೆ ಮಂಡಳಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ನಿರಂತರ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಭುನೇಶ್ವರ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಿಂದ ಕ್ರಿಕೆಟರ್ ಎಂಬ ಪದವನ್ನು ತೆಗೆದುಹಾಕಿದ್ದಾರೆ.
ಭಾರತೀಯ ವೇಗದ ಬೌಲರ್ ಕ್ರಿಕೆಟರ್ ಪದವನ್ನು ತೆಗೆದುಹಾಕಿದ್ದರಿಂದ ನಿವೃತ್ತಿಯ ವಿಷಯ ಮುನ್ನಲೆಗೆ ಬಂದಿದೆ. ಸಮಾಜಿಕ ಜಾಲತಾಣದಲ್ಲಿ ಭುವನೇಶ್ವರ್ ಕುಮಾರ್ ಕುರಿತು ಕ್ರಿಕೆಟ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಭುವನೇಶ್ವರ್ ಅವರ ಇನ್‌ಸ್ಟಾ ಬಯೋ ಹಿಂದೆ 'ಭಾರತೀಯ ಕ್ರಿಕೆಟಿಗ' ಎಂದಿತ್ತು. ಆದರೆ, ಈಗ ಅವರ ಬಯೋ ಬದಲಾಗಿದ್ದು ಅದರಲ್ಲಿ "ಭಾರತೀಯ, ಕುಟುಂಬ ಮೊದಲು, ಪ್ರಾಣಿ ಪ್ರೇಮಿ, ಕ್ಯಾಶುಯಲ್ ಗೇಮರ್" ಎಂದಿದೆ.
ಭಾರತ ತಂಡದ ಈ ವೇಗದ ಬೌಲರ್ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕಾಗಿ ಕೊನೆಯ ಏಕದಿನ ಪಂದ್ಯವನ್ನು ಆಡಿದರು, ಅಲ್ಲಿ ಅವರು 8 ಓವರ್ ಮಾಡಿದ್ದು, ಯಾವುದೇ ವಿಕೆಟ್ ಪಡೆದುಕೊಂಡಿರಲಿಲ್ಲ. ಆ ನಂತರ ಗಾಯ ಮತ್ತು ಕಳಪೆ ಫಾರ್ಮ್‌ನಿಂದಾಗಿ ಅವರನ್ನು ಏಕದಿನ ತಂಡದಿಂದ ಕೈಬಿಡಲಾಯಿತು. ಆದರೆ, ಭುವನೇಶ್ವರ್ ಕುಮಾರ್ ಅವರು ನವೆಂಬರ್ 2022 ರಲ್ಲಿ ನಡೆದ ಟಿ 20 ವಿಶ್ವಕಪ್ ತಂಡದ ಭಾಗವಾಗಿದ್ದರು. ವಿಶ್ವಕಪ್ನಲ್ಲಿ ಅವರು 4 ಪಂದ್ಯಗಳನ್ನು ಆಡಿದ್ದು 3 ವಿಕೆಟ್ ಪಡೆದಿದ್ದರು. ವಿಶ್ವಕಪ್ನಲ್ಲಿ ಅವರಿಂದ ಗಮನಾರ್ಹ ಪ್ರದರ್ಶನ ಕಂಡು ಬಂದಿರಲಿಲ್ಲ.