ಕೇಪ್ ಟೌನ್:ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಸರಣಿ ನಿರ್ಧರಿಸುವ ಪಂದ್ಯದಲ್ಲಿ ನಿರಾಸದಾಯಕ ಬ್ಯಾಟಿಂಗ್ ಪ್ರದರ್ಶನ ತೋರಿರುವುದಕ್ಕೆ ಕೆಲವು ಕ್ರಿಕೆಟ್ ವಿಶ್ಲೇಷಕರು ಸೇರಿದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಮುಂದಾದರು ಬೆಂಚ್ ಕಾಯುತ್ತಿರುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
ಕೇಪ್ಟೌನ್ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆ ಸುತ್ತಿದ್ದ ಅಜಿಂಕ್ಯ ರಹಾನೆ 2ನೇ ಇನ್ನಿಂಗ್ಸ್ನಲ್ಲಿ ಒಂದು ರನ್ಗೆ ವಿಕೆಟ್ ಒಪ್ಪಿಸಿದರು. ಇತ್ತ ಪೂಜಾರ ಮೊದಲ ಇನ್ನಿಂಗ್ಸ್ನಲ್ಲಿ 43 ರನ್ಗಳಿಸಿದರೂ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.
ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 6 ಇನ್ನಿಂಗ್ಸ್ಗಳಲ್ಲಿ 48, 20, 0, 58, 9, 0 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರಾರೆ. ಅವರು 2020 ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ್ದು ಹೊರತುಪಡಿಸಿದರೆ ಕಳೆದ 30 ಇನ್ನಿಂಗ್ಸ್ಗಳಲ್ಲಿ ಕೇವಲ 3 ಅರ್ಧಶತಕ ಸಿಡಿಸಿದ್ದಾರೆ. ಜೊತೆಗೆ 2021ರಲ್ಲಿ 11 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, 6 ಬಾರಿ 20 ರನ್ಗಳಿಸಲೂ ಕೂಡ ವಿಫಲರಾಗಿದ್ದಾರೆ.
ಇತ್ತ ಪೂಜಾರ ಶತಕ ಸಿಡಿಸಿ 3 ವರ್ಷಗಳೇ ಕಳೆದಿದೆ. 2019 ಜನವರಿಯಲ್ಲಿ ಆಸೀಸ್ ವಿರುದ್ಧ ಕೊನೆಯ ಬಾರಿ ಶತಕ ಸಿಡಿಸಿದ್ದರು. 2021ರಲ್ಲಿ ಪೂಜಾರ ಕೂಡ 11 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಯುವ ಬ್ಯಾಟರ್ಗಳ ಜೊತೆಯಲ್ಲಿ ಐತಿಹಾಸಿಕ ಸರಣಿ ಗೆಲ್ಲುವಲ್ಲಿ ನೆರವಾಗಿದ್ದ ಚೇತೇಶ್ವರ್ ಪೂಜಾರ ಆ ನಂತರ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ.
ಬಾರ್ಡರ್ ಗವಾಸ್ಕರ್ ಸರಣಿಯ ನಂತರ ಪೂಜಾರ 26 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಕೇವಲ 4 ಅರ್ಧಶತಕ ಸಿಡಿಸಿದ್ದಾರೆ. ಈ ಸರಣಿಯ 6 ಇನ್ನಿಂಗ್ಸ್ಗಳಲ್ಲಿ ಪೂಜಾರ 0, 16, 3,53, 43, 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಒಟ್ಟಿನಲ್ಲಿ ತಂಡಕ್ಕೆ ಆಧಾರವಾಗಬೇಕಿದ್ದ ಈ ಅನುಭವಿ ಆಟಗಾರರು ಪದೇ ಪದೇ ಕಳಪೆ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದು, ಮುಂದಿನ ಸರಣಿಯಲ್ಲಾದರೂ ಉತ್ತಮ ಫಾರ್ಮ್ನಲ್ಲಿದ್ದರೂ ಅವಕಾಶ ವಂಚಿತರಾಗಿರುವ ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ಶುಬ್ಮನ್ ಗಿಲ್ ಅಂತಹ ಯುವ ಆಟಗಾರರಿಗೆ ಅವಕಾಶ ಕೊಟ್ಟು ಭವಿಷ್ಯದಲ್ಲಿ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ನೆರವಾಗಬೇಕೆಂದು ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ಆ್ಯಷಸ್ ಕ್ರಿಕೆಟ್: ಆಸ್ಟ್ರೇಲಿಯಾದ ಮಾರ್ಕ್ ಹ್ಯಾರೀಸ್ಗೆ ಕೊಕ್.. ಉಸ್ಮಾನ್ ಖವಾಜಾಗೆ ಚಾನ್ಸ್