ಕರ್ನಾಟಕ

karnataka

ETV Bharat / sports

ಕ್ರಿಕೆಟ್‌ ಸ್ಟೇಡಿಯಂಗಳಲ್ಲಿ ಅವ್ಯವಸ್ಥೆ: ವಿಶ್ವಕಪ್​ಗೂ ಮುನ್ನ ನವೀಕರಣಕ್ಕೆ ಮುಂದಾದ ಬಿಸಿಸಿಐ - ETV Bharath Kannada news

ಕ್ರೀಡಾಂಗಣಗಳಲ್ಲಿನ ಕಳಪೆ ಸೌಲಭ್ಯಗಳ ಬಗ್ಗೆ ಅಭಿಮಾನಿಗಳು ನಿರಂತರವಾಗಿ ದೂರು ನೀಡುತ್ತಿದ್ದು, ಬಿಸಿಸಿಐ ಕೊನೆಗೂ ಗಂಭೀರವಾಗಿ ಪರಿಗಣಿಸಿದೆ.

With fans constantly complaining of poor facilities at stadiums, BCCI plans massive upgrade ahead of World Cup
ಸ್ಟೇಡಿಯಂ ಬಗ್ಗೆ ಅಭಿಮಾನಿಗಳ ದೂರು: ವಿಶ್ವಕಪ್​ಗೂ ಮುನ್ನ ಕ್ರೀಡಾಂಗಣಗಳ ನವೀಕರಣಕ್ಕೆ ಮುಂದಾದ ಬಿಸಿಸಿಐ

By

Published : Apr 11, 2023, 6:17 PM IST

ನವದೆಹಲಿ: ಭಾರತದಲ್ಲಿ ವರ್ಷಕ್ಕೊಂದರಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣಗಳು ತಲೆ ಎತ್ತುತ್ತಿವೆ. ಪ್ರತಿ ರಾಜ್ಯದಲ್ಲಿ ಕನಿಷ್ಠ ಒಂದಾದರೂ ಅಂತಾರಾಷ್ಟ್ರೀಯ ಕ್ರೀಡಾಂಗಣವಿದೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಅಭಿಮಾನಿಗಳು ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್​ ಆಡಳಿತ ಮಂಡಳಿಯಾಗಿರುವ ಬಿಸಿಸಿಐಗೆ ಇದು ಕಪ್ಪು ಚುಕ್ಕೆ ಆಗಿದೆ. ಈ ಕಾರಣದಿಂದ ಎಚ್ಚೆತ್ತುಕೊಂಡಿರುವ ಮಂಡಳಿ ಕ್ರೀಡಾಂಗಣದ ಅಭಿವೃದ್ಧಿಯತ್ತ ಗಮನ ಹರಿಸಿದೆ.

ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಸಂದರ್ಭದಲ್ಲಿ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸ್ವಚ್ಛ ಶೌಚಾಲಯಗಳ ಕೊರತೆಯ ಬಗ್ಗೆ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದರು. ಇನ್ನೇನು ಕೆಲ ತಿಂಗಳುಗಳಲ್ಲಿ ಭಾರತ ಏಕದಿನ ವಿಶ್ವಕಪ್​ ಕ್ರಿಕೆಟ್​ಗೆ ಆತಿಥ್ಯ ವಹಿಸಲಿದ್ದು, ಈ ವೇಳೆಗೆ ಕಳಪೆ ಗುಣಮಟ್ಟದ ಕ್ರೀಡಾಂಗಣಗಳನ್ನು ಉತ್ತಮ ದರ್ಜೆಗೇರಿಸಲು ಬಿಸಿಸಿಐ ಚಿಂತಿಸಿದೆ.

ಇದಕ್ಕಾಗಿ ಕನಿಷ್ಠ 500 ಕೋಟಿ ರೂ ವೆಚ್ಚವನ್ನು ಮಾಡಲು ಮಂಡಳಿ ಮುಂದಾಗಿದೆ. ಟೆಸ್ಟ್​ ಪಂದ್ಯಗಳ ವೇಳೆ ನಿರ್ವಹಣೆಯ ಬಗ್ಗೆ ದೂರುಗಳು ಬಂದ ನಂತರ ಕ್ರೀಡಾಂಗಣಗಳನ್ನು ಬಿಸಿಸಿಐ ಮೌಲ್ಯಮಾಪನ ಮಾಡಿಸಿದೆ. ಅದರಂತೆ ಕೆಲವು ಕ್ರೀಡಾಂಗಣಗಳನ್ನು ಗುರುತು ಮಾಡಿರುವ ಮಂಡಳಿ ಅವುಗಳ ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ. ಪಟ್ಟಿಯ ಪ್ರಕಾರ ಹೈದರಾಬಾದ್, ಕೋಲ್ಕತ್ತಾ, ಮೊಹಾಲಿ ಮತ್ತು ಮುಂಬೈ ಎಂದು ತಿಳಿದುಬಂದಿದೆ. ಪ್ರತಿ ಸ್ಟೇಡಿಯಂ ಮೇಲೆ ಸರಿಸುಮಾರು ನೂರು ಕೋಟಿ ರೂ ವೆಚ್ಚಕ್ಕೆ ಬಿಸಿಸಿಐ ಮುಂದಾಗಿದೆ ಎಂದು ತಿಳಿದುಬಂದಿದೆ.

ಯಾವೆಲ್ಲಾ ಕ್ರೀಡಾಂಗಣಗಳ ನವೀಕರಣ:ಕೆಲವು ಕ್ರೀಡಾಂಗಣಗಳ ಮೇಲ್ಛಾವಣಿ ಬಿಟ್ಟು ಬಾಕಿ ರಿಪೇರಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ವೆಚ್ಚ ತಗುಲುವ ಸಾಧ್ಯತೆ ಮೌಲ್ಯಮಾಪನದಲ್ಲಿ ಕಂಡುಬಂದಿದೆ. ದೆಹಲಿಯ ಕ್ರೀಡಾಂಗಣವನ್ನು ನವೀಕರಿಸಲು 100 ಕೋಟಿ ರೂ., ಹೈದರಾಬಾದ್‌ಗೆ 117.17 ಕೋಟಿ ರೂ., ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ರೂ. 127.47 ಕೋಟಿ, ಮೊಹಾಲಿಯ ಹಳೆಯ ಪಿಸಿಎ ಕ್ರೀಡಾಂಗಣಕ್ಕೆ ರೂ. 79.46 ಕೋಟಿ ಮತ್ತು ವಾಂಖೆಡೆಗೆ ರೂ. 78.82 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವಕಪ್​ ನಡೆಯುವ ಕ್ರೀಡಾಂಗಣಗಳು:2023ರ ವಿಶ್ವಕಪ್​ ಪಂದ್ಯಗಳು ಭಾರತದಲ್ಲಿ ನಡೆಯಲಿರುವ ಕಾರಣ 12 ಕ್ರಿಡಾಂಗಣಗಳನ್ನು ಬಿಸಿಸಿಐ ಗುರುತಿಸಿದೆ. ಇದರಲ್ಲಿ ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್, ಮುಂಬೈ ಮತ್ತು ಅಹಮದಾಬಾದ್ ಸೇರಿದೆ. ಅತಿ ಹೆಚ್ಚು ಜನ ಕುಳಿತುಕೊಳ್ಳುವ ಸಾಮರ್ಥ್ಯ ಇರುವ ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್​ ಫೈನಲ್​ ಪಂದ್ಯ ನಡೆಯುವ ಸಾಧ್ಯತೆ ಇದೆ. ಐಸಿಸಿ ಇನ್ನೂ ವೇಳಾಪಟ್ಟಿ ಪ್ರಕಟಿಸದ ಕಾರಣ ಪಂದ್ಯದ ದಿನಾಂಕ ಸ್ಪಷ್ಟವಾಗಿಲ್ಲ. 2023ರ ವಿಶ್ವಕಪ್​ನ 48 ಪಂದ್ಯಗಳು 46 ದಿನಗಳ ಕಾಲ ನಡೆಯಲಿದೆ. ಭಾರತ 2011ರಲ್ಲಿ ವಿಶ್ವಕಪ್ ಅ​ನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಭಾರತ ಕಪ್ ಗೆದ್ದುಕೊಂಡಿತ್ತು.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್‌ಗೆ ಜೊತೆಯಾಟದ ಕೊರತೆ ಕಾಡುತ್ತಿದೆ: ಸುನಿಲ್​ ಗವಾಸ್ಕರ್

ABOUT THE AUTHOR

...view details