ಚೆನ್ನೈ: ಕೆಕೆಆರ್ ವಿರುದ್ಧ ಎಬಿ ಡಿ ವಿಲಿಯರ್ಸ್ ಸ್ಫೋಟಕ ಅರ್ಧಶತಕ(76) ಸಿಡಿಸಿದ ಬೆನ್ನಲ್ಲೇ ಮುಂಬರುವ ಟಿ-20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕಮ್ಬ್ಯಾಕ್ ಮಾಡಿ ಎಂದು ಟ್ವಿಟ್ಟಿಗರು ಮನವಿ ಮಾಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಬಿಡಿ ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 76 ರನ್ ಸಿಡಿಸಿ ತಂಡದ ಮೊತ್ತವನ್ನು 204ರ ಗಡಿ ದಾಟಿಸಿದ್ದ ಎಬಿಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅಲ್ಲದೆ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧವೂ ಆಕರ್ಷಕ 48 ರನ್ ಗಳಿಸಿ 2 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದರು.
ಎಬಿಡಿ 2 ವರ್ಷಗಳ ಹಿಂದೆಯೇ ನಿವೃತ್ತಿಯಾದರೂ ಚುಟುಕು ಕ್ರಿಕೆಟ್ನಲ್ಲಿ ಪ್ರಸ್ತುತ ಸಕ್ರಿಯ ಆಟಗಾರರಿಗಿಂತಲೂ ಅದ್ಭುತವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದರಲ್ಲೂ 5 ತಿಂಗಳಿನಿಂದ ಕ್ರಿಕೆಟ್ ಆಡದಿದ್ದರೂ ಯುವ ಆಟಗಾರರನ್ನು ನಾಚಿಸುವಂತೆ ಬ್ಯಾಟ್ ಬೀಸುತ್ತಿದ್ದಾರೆ. ಇದೇ ಕಾರಣಕ್ಕೆ ಟ್ವಿಟರ್ನಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಎಬಿಡಿಯನ್ನು ಮತ್ತೆ ಗ್ರೀನ್ ಜರ್ಸಿಯಲ್ಲಿ ಕಾಣುವ ಆಶಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಲ್ಲಿ ವೀಕ್ಷಕ ವಿವರಣೆಗಾರನಾಗಿರುವ ಹರ್ಷ ಭೋಗ್ಲೆ, "ದಕ್ಷಿಣ ಆಫ್ರಿಕಾ ಖಂಡಿತಾ ಎಬಿ ಡಿ ವಿಲಿಯರ್ಸ್ರನ್ನು ಟಿ-20 ವಿಶ್ವಕಪ್ನಲ್ಲಿ ಆಡಿಸಲು ದಾರಿಯನ್ನು ಕಂಡುಕೊಳ್ಳಬೇಕಿದೆ" ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಟಿವಿ ನಿರೂಪಕಿಯಾಗಿರುವ ಇಶಾ ಗುಹಾ, " ದಯವಿಟ್ಟು ಯಾರಾದ್ರೂ ವಿಶ್ವಕಪ್ನಲ್ಲಿ ಆಡುವಂತೆ ವಿಲಿಯರ್ಸ್ರೊಂದಿಗೆ ಮಾತನಾಡ್ತೀರಾ?" ಎಂದು ಮನವಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಸಿಎಸ್ಎ ಕೋಚ್ ಮಾರ್ಕ್ ಬೌಷರ್ ಕೂಡ ಎಬಿಡಿಗೆ ದಕ್ಷಿಣ ಆಫ್ರಿಕಾ ತಂಡದ ಬಾಗಿಲು ತೆರೆದಿರುತ್ತದೆ ಎಂದು ಹೇಳಿದ್ದರು. ಈಗಾಗಲೇ ಈ ಕುರಿತು ಅವರ ಜೊತೆ ಮಾತನಾಡುತ್ತಿರುವುದಾಗಿಯೂ ತಿಳಿಸಿದ್ದರು. ಇದೀಗ ಕೆಕೆಆರ್ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಎಬಿಡಿ, "ನಾನು ಇದುವರೆಗೆ ಬೌಷರ್ ಜೊತೆ ಕಮ್ಬ್ಯಾಕ್ ಬಗ್ಗೆ ಚರ್ಚಿಸಿಲ್ಲ. ಆದರೆ ಐಪಿಎಲ್ ಸಮಯದಲ್ಲಿ ಮಾತನಾಡಲು ಸಿದ್ಧವಾಗಿದ್ದೆವು. ಅವರು ಕಳೆದ ವರ್ಷವೇ ನನ್ನೊಂದಿಗೆ ಮಾತನಾಡಿದ್ದರು. ಇದೀಗ ಐಪಿಎಲ್ ಮುಗಿಯುವ ವೇಳೆ ನನ್ನ ಫಾರ್ಮ್, ನನ್ನ ಫಿಟ್ನೆಸ್ ಮತ್ತು ತಂಡದ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಬ್ಯಾಟ್ಸ್ಮನ್ಗಳು ಪರದಾಡೋ ಪಿಚ್ನಲ್ಲಿ ಪ್ರಜ್ವಲಿಸಿದ ಎಬಿಡಿ, ಮ್ಯಾಕ್ಸ್ವೆಲ್