ಬೆಂಗಳೂರು : ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಜಮಾನ್ ಅವರು ವಿಶ್ವಕಪ್ ಇತಿಹಾಸದಲ್ಲಿ ತಮ್ಮ ದೇಶದ ಪರ ವೇಗದ ಶತಕ ಸಿಡಿಸುವ ಮೂಲಕ ಶನಿವಾರ ಇತಿಹಾಸ ನಿರ್ಮಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಜಮಾನ್ ಈ ಸಾಧನೆಯನ್ನು ಮಾಡಿದ್ದಾರೆ.
2007ರ ವಿಶ್ವಕಪ್‌ನಲ್ಲಿ ಇಮ್ರಾನ್ ನಜೀರ್ ಅವರ 95 ಬಾಲ್ ಆಡಿ ಶತಕ ಗಳಿಸಿದ್ದು, ಪಾಕ್ ಪರ ವಿಶ್ವಕಪ್ನ ವೇಗದ ಶತಕವಾಗಿತ್ತು. ಕೀವೀಸ್ ವಿರುದ್ಧ ಪಾಕ್ ಆರಂಭಿಕ ಆಟಗಾರ ಫಖರ್ ಜಮಾನ್ ಕೆವಲ 63 ಬಾಲ್ಗಳನ್ನು ಎದುರಿಸಿ ಶತಕ ಪೂರೈಸಿಕೊಂಡರು. ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 81 ರನ್ಗೆ ಔಟ್ ಆಗಿ 29 ರನ್ನಿಂದ ಶತಕ ವಂಚಿತರಾಗಿದ್ದ ಜಮಾನ್ ಇಂದು ಅದೇ ಫಾರ್ಮ್ ಮುಂದುವರೆಸಿ ದಾಖಲೆಯ ಶತಕ ಮಾಡಿಕೊಂಡಿದ್ದಾರೆ.
160 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 155 ಇನ್ನಿಂಗ್ಸ್ ಆಡಿರುವ ಜಮಾನ್ 34.90ರ ಸರಾಸರಿಯಲ್ಲಿ 5,096 ರನ್ ಗಳಿಸಿದ್ದಾರೆ. ಜಿಂಬಾಬ್ವೆ ವಿರುದ್ಧ 210 ರನ್ ಗಳಿಸಿರುವುದು ಅವರ ಬೆಸ್ಟ್ ಸ್ಕೋರ್ ಆಗಿದೆ. ಮೂರು ಟೆಸ್ಟ್ ಪಂದ್ಯದಲ್ಲಿ ಎರಡು ಅರ್ಧಶತಕದಿಂದ 32.00 ಸರಾಸರಿಯಲ್ಲಿ 192 ರನ್ ಗಳಿಸಿದ್ದಾರೆ. 81 ಏಕದಿನ ಪಂದ್ಯ ಆಡಿದ್ದು, 46.90ರ ಸರಾಸರಿಯಲ್ಲಿ 3,471 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 11 ಶತಕ, 16 ಅರ್ಧಶತಕ ಒಳಗೊಂಡಿದೆ. 76 ಟಿ -20 ಆಡಿರುವ ಅವರು 128.17 ರ ಸ್ಟ್ರೈಕ್ ರೇಟ್‌ನಲ್ಲಿ 1,433 ರನ್ ಕಲೆಹಾಕಿದ್ದಾರೆ.
ಶತಕ ವಿಕೆಟ್ ಪಡೆದ ಹಸನ್ ಅಲಿ: ಕಿವೀಸ್ ವಿರುದ್ಧದ ಪಂದ್ಯದಲ್ಲಿ ಪಾಕ್ ಬೌಲರ್ಗಳು ದಂಡಿಸಿಕೊಂಡರೂ ದಾಖಲೆಗಳನ್ನು ಮಾಡಿದ್ದಾರೆ. ಪಾಕಿಸ್ತಾನದ ವೇಗಿ ಹಸನ್ ಅಲಿ ಇಂದು 100 ಏಕದಿನ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಕಿವೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅಲಿ ಈ ಮೈಲಿಗಲ್ಲು ತಲುಪಿದರು.
ಪಂದ್ಯದಲ್ಲಿ ಹಸನ್ ಅಲಿ 10 ಓವರ್ ಮಾಡಿ 8.2 ಎಕಾನಮಿ ರೇಟ್‌ನಲ್ಲಿ 82 ರನ್ ನೀಡಿ ಒಂದು ವಿಕೆಟ್ ಪಡೆದರು. ಪಂದ್ಯದ ಮಟ್ಟಿಗೆ ಅವರು ದುಬಾರಿ ಆದರೂ ಡೆವೊನ್ ಕಾನ್ವೇ ಅವರ ವಿಕೆಟ್ ಪಡೆಯುವ ಮೂಲಕ ಶತಕದ ವಿಕೆಟ್ ಸಾಧನೆ ಮಾಡಿದರು. ಪಾಕಿಸ್ತಾನಿ ಬೌಲರ್ ಪೈಕಿ ಶತಕ ವಿಕೆಟ್ ಪಡೆದ ಐದನೇ ವೇಗದ ಬೌಲರ್ ಆಗಿದ್ದಾರೆ. ಬಾಂಗ್ಲಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಶಾಹೀನ್ ಅಫ್ರಿದಿ 50 ಪಂದ್ಯಗಳಲ್ಲಿ ಈ ಮೈಲಿಗಲ್ಲು ಸಾಧಿಸಿ ಪಾಕ್ ಪರ ಮೊದಲಿಗರಾಗಿದ್ದಾರೆ.
150ನೇ ವಿಕೆಟ್ ಪಡೆದ ರೌಫ್: ಇದೇ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ಗಳ ಕೈಯಿಂದ ಸರಿಯಾಗಿ ಚಚ್ಚಿಸಿಕೊಂಡರೂ ಹ್ಯಾರಿಸ್ ರೌಫ್ 150ನೇ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕಿವೀಸ್ ಬ್ಯಾಟರ್ ಡೆರಿಲ್ ಮಿಚೆಲ್ ಅವರ ವಿಕೆಟ್ ಪಡೆದ ರೌಫ್ ಈ ಮೈಲಿಗಲ್ಲನ್ನು ತಲುಪಿದ್ದಾರೆ. 99 ಪಂದ್ಯಗಳಲ್ಲಿ, ರೌಫ್ 150 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು 24 ಕ್ಕಿಂತ ಹೆಚ್ಚು ಸರಾಸರಿ ಬೌಲಿಂಗ್ ಮಾಡಿ ಪಡೆದಿದ್ದಾರೆ. 18 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿದ್ದು, ಅವರ ಬೆಸ್ಟ್ ಅಂಕಿ- ಅಂಶವಾಗಿದೆ.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಕಿವೀಸ್ ವಿರುದ್ಧ 21 ರನ್ಗಳ ಜಯ ದಾಖಲಿಸಿದ ಪಾಕ್..