ಮುಂಬೈ: ಫಾಫ್ ಡು ಪ್ಲೆಸಿಸ್ ಆಕರ್ಷಕ 95 ಮತ್ತು ಯುವ ಬ್ಯಾಟ್ಸ್ಮನ್ ರುತುರಾಜ್ ಗಾಯಕ್ವಾಡ್(65) ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 220 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಬ್ಯಾಟ್ಸ್ಮನ್ಗಳ ಸ್ವರ್ಗವಾಗಿರುವ ಮುಂಬೈನ ವಾಂಖೆಡೆಯಲ್ಲಿ ಟಾಸ್ ಸೋತರು ಬ್ಯಾಟಿಂಗ್ ಇಳಿದ ಚೆನ್ನೈ ಅಬ್ಬರ ಬ್ಯಾಟಿಂಗ್ ನಡೆಸಿ ಕೆಕೆಆರ್ಗೆ 221ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಕಳೆದ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಇಂದು ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಮೊದಲ ವಿಕೆಟ್ಗೆ ಅನುಭವಿ ಪ್ಲೆಸಿಸ್ ಜೊತೆಗೂ 115 ರನ್ ಸೇರಿಸಿದರು. 42 ಎಸೆತಗಳಲ್ಲಿ ರುತುರಾಜ್ 4 ಸಿಕ್ಸರ್ ಹಾಗೂ 6 ಬೌಂಡರಿಗಳ ಸಹಿತ 64 ರನ್ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.
ಜೊತೆಗಾರನ ವಿಕೆಟ್ ಕಳೆದುಕೊಂಡರು ದೃತಿಗೆಡದ ಪ್ಲೆಸಿಸ್ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಮುಂದುವರಿಸಿದರು. ಅವರು ಮೊಯೀನ್ ಅಲಿ ಜೊತೆಗೂಡಿ 25 ಎಸೆತಗಳಲ್ಲಿ 50 ರನ್ ಸೇರಿಸಿದರು. ಅಲಿ 12 ಎಸೆತಗಳಲ್ಲಿ 25 ರನ್ಗಳಿಸಿದರು. ನಂತರ ಬಂದ ಧೋನಿ 8 ಎಸೆತಗಳಲ್ಲಿ 17 ರನ್ಗಳಿಸಿ ಔಟಾದರು.
ಆರಂಭದಿಂದ ಕೊನೆಯವರೆಗೂ ಅಬ್ಬರದ ಬ್ಯಾಟಿಂಗ್ ನಡೆಸಿದ ಡುಪ್ಲೆಸಿಸ್ 60 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 95 ರನ್ ಸಿಡಿಸಿದರು. 20ನೇ ಓವರ್ 5ನೇ ಎಸೆತದಲ್ಲಿ ಇನ್ಸೈಡ್ ಎಡ್ಜ್ ಅದ ಚೆಂಡ ಕೀಪರ್ ಕೈಗೆ ಸೇರಿದ್ದರಿಂದ ಕೇವಲ ಸಿಂಗಲ್ಸ್ ತೆಗೆದುಕೊಳ್ಳಲಷ್ಟೇ ಶಕ್ತವಾಗಿ ತಮ್ಮ ಚೊಚ್ಚಲ ಶತಕ ತಪ್ಪಿಸಿಕೊಂಡರು. ಅದರೆ ಕೊನೆಯ ಎಸೆತವನ್ನು ಜಡೇಜಾ ಸಿಕ್ಸರ್ಗಟ್ಟುವಲ್ಲಿ ಯಶಸ್ವಿಯಾದರು.
ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 27ಕ್ಕೆ 1, ನರೈನ್ 34ಕ್ಕೆ 1 ಮತ್ತು ರಸೆಲ್ 27ಕ್ಕೆ 1 ವಿಕೆಟ್ ಪಡೆದರು, 15 ಕೋಟಿಯ ಪ್ಯಾಟ್ ಕಮ್ಮಿನ್ಸ್ 58 ರನ್, ಕನ್ನಡಿಗ ಪ್ರಸಿಧ್ ಕೃಷ್ಣ 49 ರನ್ ನೀಡಿ ದುಬಾರಿಯಾದರು.