ಅಬುಧಾಬಿ: ಇಲ್ಲಿ ನಡೆಯುತ್ತಿರುವ ಟಿ10 ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ಆಟಗಾರ ಫಾಫ್ ಡು ಪ್ಲೆಸಿಸ್ ಅವರು ರಾಷ್ಟ್ರೀಯ ತಂಡಕ್ಕೆ ಮರಳುವ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್ ವೇಳೆಗೆ ತಂಡದಲ್ಲಿ ಸ್ಥಾನ ಸಿಕ್ಕರೆ ಆಡುವುದಾಗಿ ಕೋಚ್‌ಗೆ ಹೇಳಿರುವುದಾಗಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ತಂಡಕ್ಕೆ ಹಿರಿಯ ಆಟಗಾರರು ವಿಶ್ವಕಪ್ ಉದ್ದೇಶದಿಂದ ಮರಳುತ್ತಾರೆ ಎಂಬ ವದಂತಿಗಳು ಹರಡಿದ್ದವು. ಈ ವದಂತಿಗೆ ಪುಷ್ಠಿ ನೀಡುವಂತೆ ಫಾಫ್ ಮಾತನಾಡಿದ್ದಾರೆ. 2024ರ ಜೂನ್ನಲ್ಲಿ ಟಿ20 ವಿಶ್ವಕಪ್ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ನಡೆಯಲಿದೆ.
ಪಂದ್ಯಕ್ಕೂ ಮೊದಲು ನಡೆದ ಸಂದರ್ಶನದಲ್ಲಿ ಫಾಫ್ ಮಾತನಾಡಿದ್ದು, "ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬಹುದು. ನಾವು ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಮಾತನಾಡುತ್ತಿದ್ದೇವೆ. ಮುಂದಿನ ವರ್ಷ ನಡೆಯುವ ಟಿ20ವಿಶ್ವಕಪ್ನ ಬಗ್ಗೆ ಲೆಕ್ಕಾಚಾರ ಮಾಡುತ್ತಿದ್ದೇವೆ. ಹೊಸ ಕೋಚ್ ಜೊತೆಗೆ ಈ ಬಗ್ಗೆ ಮಾತನಾಡಿದ್ದೇವೆ" ಎಂದಿದ್ದಾರೆ.
39 ವರ್ಷದ ಫಾಫ್ ಈ ಸಮಯದಲ್ಲೂ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ವಯಸ್ಸಿನ ಹೊರತಾಗಿಯೂ ಅಭ್ಯಾಸಗಳು ಮತ್ತು ಜಿಮ್ನಲ್ಲಿ ಅವರ ದಿನಚರಿ ಕುರಿತು ಮಾತನಾಡುತ್ತಾ, "ನಾನು ತುಂಬಾ ಇಷ್ಟಪಡುವ ಈ ಅದ್ಭುತ ಆಟ ಆಡಲು ದೇಹವನ್ನು ಸಿದ್ಧವಾಗಿಡಲು ಬೇಕಾದಷ್ಟು ಪರಿಶ್ರಮ ಪಡುತ್ತೇನೆ. ನಿಮಗೆ ವಯಸ್ಸಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ, ನೀವು ಇನ್ನೂ ಕೆಲಸದಲ್ಲಿ ತೊಡಗಿದ್ದೀರಿ ಎಂಬುದು ದೇಹಕ್ಕೆ ತಿಳಿಯುವಂತೆ ಮಾಡಬೇಕು. ದೇಹದ ಕೆಲವು ಅಂಗಗಳು ನಮ್ಮ ಚಟುವಟಿಕೆಗೆ ಸಹಕರಿಸುವುದಿಲ್ಲ. ಆಗ ನಾವು ಇತರೆ ಆಟಗಾರರಿಗೆ ಹೋಲಿಸಿಕೊಂಡು ನಾವು ಅವರಂತೆ ಆಡಲು ಸಾಧ್ಯವೇ ಇಂದು ಖಚಿತಪಡಿಸಿಕೊಳ್ಳಬೇಕು. ಅದಕ್ಕೆ ವೇಗವಾಗಿ ಓಡುವುದು ಮತ್ತು ದೇಹವನ್ನು ಇತರೆ ಪರೀಕ್ಷೆಗಳಿಗೆ ಒಳಪಡಿಸಬೇಕು" ಎಂದು ಹೇಳಿದರು.
ಟಿ10 ಸ್ವರೂಪದ ಪಂದ್ಯಗಳ ಬಗ್ಗೆ ಮಾತನಾಡಿದ ಫಾಫ್, "ಎರಡನೇ ಆವೃತ್ತಿ ಖಂಡಿತವಾಗಿಯೂ ಸುಲಭವಾಗಿದೆ. ನಾನು ಮೊದಲ ಬಾರಿಗೆ ಬಂದಾಗ ಟಿ20 ಮತ್ತು ಟಿ10 ತುಂಬಾ ಹೋಲುತ್ತದೆ ಎಂದು ಯೋಚಿಸುತ್ತಿದ್ದೆ, ಇಲ್ಲ. ಇದು ತುಂಬಾ ವಿಭಿನ್ನ."
"ನನಗೆ ಟಿ10ಯಲ್ಲಿ ತುಂಬಾ ಆಶ್ಚರ್ಯ ಉಂಟುಮಾಡುವ ಹಲವಾರು ಆಟಗಾರರಿದ್ದಾರೆ. ಚುಟುಕು ಮಾದರಿ ಅದ್ದರಿಂದ ಯಾರು ಯಾವಾಗ ತಂಡದ ಮೇಲೆ ಪರಿಣಾಮ ಬೀರುತ್ತಾರೆ ಎಂದು ಊಹಿಸುವುದು ಕಷ್ಟ. ಇರುವ ಕೌಶಲ್ಯದೊಂದಿಗೆ ಪ್ರತಿ ಕ್ಷಣವೂ ಸ್ಪರ್ಧಿಸಲು ತಯಾರಾಗಿರಬೇಕು" ಎಂದಿದ್ದಾರೆ.
ಇದನ್ನೂ ಓದಿ:'ಆರ್ಸಿಬಿ ಅಭಿಮಾನಿಗಳೆದುರು ಚಿನ್ನಸ್ವಾಮಿ ಮೈದಾನದಲ್ಲಿ ಡಬ್ಲ್ಯುಪಿಎಲ್ ಆಡುವ ಆಸೆ'