ಬೆಂಗಳೂರು:ಕಳೆದ ಎರಡು-ಮೂರು ವಾರಗಳಿಂದ ಕುತೂಹಲ ಮೂಡಿಸಿದ್ದ ಆರ್ಸಿಬಿ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ಕೊನೆಗೂ ಶನಿವಾರ ಉತ್ತರ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಬೆಂಗಳೂರು ಫ್ರಾಂಚೈಸಿಯ ನೂತನ ನಾಯಕನಾಗಿ ನೇಮಕವಾಗಿದ್ದಾರೆ.
2022ರ ಐಪಿಎಲ್ನಲ್ಲಿ 10 ತಂಡಗಳು ಸ್ಪರ್ಧಿಸುತ್ತಿವೆ. ಈಗಾಗಲೇ 9 ಫ್ರಾಂಚೈಸಿಗಳು ತಮ್ಮ ನಾಯಕತ್ವವನ್ನು ಘೋಷಿಸಿವೆ. ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಕೂಡ ಪ್ಲೆಸಿಸ್ರನ್ನು ಕಫ್ತಾನ್ಅನ್ನು ಘೋಷಿಸಿದೆ.
ಪ್ಲೆಸಿಸ್ ಐಪಿಎಲ್ನಲ್ಲಿ ನಾಯಕನಾಗಿ ಕಾರ್ಯನಿರ್ವಹಿಸದಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ನಾಯಕತ್ವದ ಗುಂಪಿನಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ಲೆಸಿಸ್ 2012 ರಿಂದ 2019ರವರೆಗೆ ಹರಿಣಗಳ ಟಿ20 ಪಡೆಯನ್ನು ಮುನ್ನಡೆಸಿ ಶೇ.63ರ ಗೆಲುವಿನ ಸರಾಸರಿಯನ್ನು ಹೊಂದಿದ್ದಾರೆ.
ಫಾಫ್ ಡು ಪ್ಲೆಸಿಸ್ ಆರ್ಸಿಬಿ ನಾಯಕತ್ವ ವಹಿಸಿಕೊಂಡ 7ನೇ ಕ್ರಿಕೆಟಿಗ ಹಾಗೂ 3ನೇ ವಿದೇಶಿಗನಾಗಿದ್ದಾರೆ. 2008ರ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್ 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ನಂತರ 2009ರಲ್ಲಿ ಇಂಗ್ಲೆಂಡ್ನ ಕೆವಿನ್ ಪೀಟರ್ಸನ್(6 ಪಂದ್ಯ), ಅನಿಲ್ ಕುಂಬ್ಳೆ 2009-10ರವರೆಗೆ 35 ಪಂದ್ಯ, 2011 ಮತ್ತು 12 ನ್ಯೂಜಿಲ್ಯಾಂಡ್ ಮಾಜಿ ನಾಯಕ ಡೇನಿಯಲ್ ವಿಟೋರಿ ಮತ್ತು 2013ರಿಂದ 2021ರವರೆಗೆ ವಿರಾಟ್ ಕೊಹ್ಲಿ 140 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದರು. ಆಸ್ಟ್ರೇಲಿಯಾದ ಶೇನ್ ವಾಟ್ಸನ್ 2017ರಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ 3 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
ಫಾಫ್ ಡು ಪ್ಲೆಸಿಸ್ 2012ರಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ಗೆ ಪದಾರ್ಪಣೆ ಮಾಡಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ಜೈಂಟ್ ಪರ ಆಡಿದ್ದಾರೆ. ಅವರು ದಶಕದ ಐಪಿಎಲ್ ಅನುಭವದಲ್ಲಿ 100 ಪಂದ್ಯಗಳನ್ನಾಡಿದ್ದು 22 ಅರ್ಧಶತಗಳ ಸಹಿತ 2935 ರನ್ ಸಿಡಿಸಿದ್ದಾರೆ.
ಇದನ್ನೂ ಓದಿ:2022ರ ಐಪಿಎಲ್ಗೆ ನೂತನ ಜರ್ಸಿ ಬಿಡುಗಡೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್