ಹೈದರಾಬಾದ್ :ಭಾರತ ತಂಡಕ್ಕೆ ಯುವ ಆಟಗಾರರು ಬರುವಿಕೆ ಹೆಚ್ಚಾಗುತ್ತಿರುವುದರಿಂದ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸ್ಫೋಟಕ ಬ್ಯಾಟ್ಸ್ಮನ್ ಸಂಜು ಸಾಮ್ಸನ್ ಸ್ಥಿರ ಪ್ರದರ್ಶನ ತೋರುವ ಅವಶ್ಯಕತೆಯಿದೆ ಎಂದು ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಶಿಖರ್ ಧವನ್ ನೇತೃತ್ವದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿಯನ್ನಾಡಲಿದೆ. ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ಇರುವುದರಿಂದ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ಸಾಮ್ಸನ್ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.
"ಸಂಜು ಸಾಮ್ಸನ್ ಅವರ ಸಾಮರ್ಥ್ಯ ಏನೆಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಹೊಸ ಆಟಗಾರನಲ್ಲದ ಕಾರಣ ಸ್ಥಿರತೆ ಕಾಪಾಡಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ. ಅಲ್ಲದೆ ಈಗ ಅವರು ಅನುಭವಿ ಆಟಗಾರ, ಆತನಿಗೆ ಯುವಕರಿಗೆ ನೀಡಿದಷ್ಟು ಬೆಂಬಲ ಸಿಗುವುದಿಲ್ಲ" ಎಂದು Etv Bharatಗೆ ಅಗರ್ಕರ್ ಹೇಳಿದ್ದಾರೆ.
ಅವರು ಹೊಸ ವ್ಯಕ್ತಿಯಾಗಿದ್ದರೆ, ನೀವು ಅವರಿಗೆ ಸ್ವಲ್ಪ ಅವಕಾಶ ನೀಡಿ, ಒಂದೆರಡು ಋತುಗಳನ್ನು ನೀಡುತ್ತೀರಿ. ಆದರೆ, ಈಗ ಅವರು ಒಬ್ಬ ಅನುಭವಿ ಆಟಗಾರರಾಗಿದ್ದಾರೆ. ಉಳಿದ ಯುವ ಆಟಗಾರರು ಅವರಿಗಿಂತ ಹೆಚ್ಚು ಸ್ಥಿರವಾದ ಪ್ರದರ್ಶನಗಳನ್ನು ನೀಡುತ್ತಿದ್ದಾರೆ" ಎಂದು ಮುಂಬೈ ಮಾಜಿ ವೇಗಿ ತಿಳಿಸಿದ್ದಾರೆ.
"ಭಾರತ ತಂಡದಲ್ಲಿ ಅವರ ಜಾಗಕ್ಕೆ ಸ್ಪರ್ಧೆ ಇದೆ. ಆದರೆ, ಅವರಿಗಿಂತ ಸ್ವಲ್ಪ ಹೆಚ್ಚು ಸ್ಥಿರವಾಗಿರುವ ಇತರ ಹುಡುಗರು ಪೈಪೋಟಿಯಲ್ಲಿದ್ದಾರೆ. ಆದರೂ ಟಿ20 ಮಾದರಿ ಸ್ಥಿರವಾಗಿರಲು ಕಷ್ಟಕರವಾದ ಸ್ವರೂಪ. ಆದರೆ, ಸಾಮ್ಸನ್ ಸ್ಥಿರ ಪ್ರದರ್ಶನ ತೋರಿದರೆ ಅವರು ತಂಡದಲ್ಲಿ ಅವಕಾಶ ಪಡೆಯದಿರಲು ನನಗೆ ಯಾವುದೇ ಕಾರಣಗಳು ಕಾಣಿಸುತ್ತಿಲ್ಲ "ಎಂದು ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.