ಕೋಲ್ಕತ್ತಾ:ಟಿ20 ವಿಶ್ವಕಪ್ನ ಫೈನಲ್ ಪಂದ್ಯ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದ್ದು, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ನ್ಯೂಜಿಲ್ಯಾಂಡ್ ಸೋಲಿಸಿ ಪಾಕಿಸ್ತಾನ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದ್ದರೆ, ಭಾರತವನ್ನು ಹೀನಾಯವಾಗಿ ಸೋಲಿಸಿ ಆಂಗ್ಲರು ಪ್ರಶಸ್ತಿ ಸುತ್ತು ತಲುಪಿದ್ದಾರೆ. ಪಾಕ್ ಮತ್ತು ಇಂಗ್ಲೆಂಡ್ ನಡುವಿನ ಈ ಪಂದ್ಯ 30 ವರ್ಷಗಳ ವಿಶ್ವಕಪ್ ದಾಖಲೆಯನ್ನು ಮರುಕಳಿಸುವ ಸಾಧ್ಯತೆ ಇದೆ.
30 ವರ್ಷಗಳ ಹಿಂದೆ ಇದೇ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಎತ್ತಿಹಿಡಿದಿತ್ತು. ಈ ದಾಖಲೆಯನ್ನು ಮತ್ತೆ ಮರುಕಳಿಸಲು ಪಾಕಿಸ್ತಾನ ಸಜ್ಜಾಗಿದ್ದರೆ, ಇಂಗ್ಲೆಂಡ್ ಎರಡನೇ ಐಸಿಸಿ ವಿಶ್ವಕಪ್ ವಶಕ್ಕೆ ತಂತ್ರ ರೂಪಿಸಿದೆ. ನಾಳಿನ ಪಂದ್ಯದ ಬಗ್ಗೆ ಪಾಕಿಸ್ತಾನ ಮಾಜಿ ಆಲ್ರೌಂಡರ್, ನಾಯಕ ಮುಷ್ತಾಕ್ ಮೊಹಮ್ಮದ್ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಪಂದ್ಯದ ರೋಚಕತೆಯ ಬಗ್ಗೆ ಹೇಳಿದ್ದಾರೆ.
30 ವರ್ಷಗಳ ಹಿಂದಿನ ದಾಖಲೆ ಇಲ್ಲಿ ನಿರ್ಮಾಣವಾಗುತ್ತಾ?: ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಇತ್ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ. 30 ವರ್ಷಗಳ ಹಿಂದಿನ ದಾಖಲೆಯನ್ನು ತಂಡ ಮರಳಿ ಬರೆಯುವ ವಿಶ್ವಾಸವಿದೆ. ಇದೊಂದು ಉತ್ತಮ ಪಂದ್ಯವಾಗಿರಲಿದ್ದು, ರೋಚಕತೆ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಬಲಾಬಲವೇನು?: ಇಂಗ್ಲೆಂಡ್ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದು ಎಂಬುದು ಸರ್ವವಿಧಿತ. ಬಲಿಷ್ಠ ಭಾರತವನ್ನು ಸದೆಬಡಿದು ಫೈನಲ್ಗೆ ಬಂದಿದೆ. ಇದು ಆ ತಂಡದ ಶಕ್ತಿ ತೋರಿಸುತ್ತದೆ. ಪಾಕಿಸ್ತಾನ ಅದೃಷ್ಟದಾಟದಲ್ಲಿ ಫೈನಲ್ಗೆ ಬಂದರೂ ಉತ್ತಮ ಪ್ರದರ್ಶನ ತೋರಿದೆ. ಅಂತಿಮ ಹಣಾಹಣಿಗೆ ಬಂದಿರುವುದು ತಂಡ ಇದೇ ಖದರ್ ಮುಂದುವರಿಸಿದಲ್ಲಿ ಪ್ರಶಸ್ತಿ ಪಡೆಯಲಿದೆ.
ಪಾಕಿಸ್ತಾನದ ಈವರೆಗಿನ ಜರ್ನಿ ಹೇಗಿತ್ತು?:ಟೂನಿರ್ಯ ಆರಂಭಿಕ ಪಂದ್ಯಗಳಲ್ಲಿನ ಹೀನಾಯ ಸೋಲು ತಂಡವನ್ನು ಕುಗ್ಗಿಸಿತ್ತು. ಬಳಿಕ ಪುಟಿದೆದ್ದ ತಂಡ ಗೆಲ್ಲುತ್ತಾ ಸಾಗಿ ಬಂದಿದ್ದು ಅದ್ಭುತವೇ ಸರಿ. ಅದರಲ್ಲೂ ನೆದರ್ಲ್ಯಾಂಡ್ ತಂಡ ಪಾಕಿಸ್ತಾನಕ್ಕೆ ಹೆಚ್ಚಿನ ಉಪಕಾರ ಮಾಡಿದೆ. ಅದೃಷ್ಟದ ಬಾಗಿಲು ತೆರೆದುಕೊಟ್ಟಿತು. ಬೌಲಿಂಗ್ ಪಡೆಯೇ ತಂಡದ ಶಕ್ತಿಯಾಗಿದೆ. ಹಿಂಬಾಗಿಲಿನಿಂದ ಬಂದ ತಂಡ ಫೈನಲ್ಗೆ ಬಂದರೂ, ಪ್ರದರ್ಶನವನ್ನು ಅಲ್ಲಗಳೆಯುವಂತಿಲ್ಲ.