ಮುಂಬೈ (ಮಹಾರಾಷ್ಟ್ರ):ಮುಂಬೈನ ವಾಂಖೆಡೆ ಮೈದಾನದಲ್ಲಿ ಮಂಗಳವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ 2 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ, ಶುಭಾರಂಭ ಮಾಡಿದೆ. ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಇಶಾನ್ ಕಿಶನ್ ಹಿಡಿದ ಕ್ಯಾಚ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮೊದಲ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಲಂಕಾಗೆ 162 ರನ್‌ಗಳ ಸಾಧಾರಣ ಟಾರ್ಗೆಟ್ ನೀಡಿತ್ತು. ಆದರೆ, ನಂತರ ಯುವ ಮಧ್ಯಮ ವೇಗಿ ಶಿವಂ ಮಾವಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಲಂಕಾದ 4 ವಿಕೆಟ್ ಕಬಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಇಶಾನ್ ಕಿಶನ್ ಹಿಡಿದ ಅದ್ಭುತ ಕ್ಯಾಚ್ ಸಖತ್ ಸದ್ದು ಮಾಡುತ್ತಿದೆ. ಬಹು ದೂರ ಓಡಿ ಇಶಾನ್ ಕಿಶನ್ ಕ್ಯಾಚ್ ದೃಶ್ಯದ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಲಂಕಾದ ಇನ್ನಿಂಗ್ಸ್ನ 8ನೇ ಓವರ್‌ಗಳಲ್ಲಿ ಚರಿತ್ ಅಸಲಂಕಾ ಬಾರಿಸಿದ ಬಾಲ್ಅನ್ನು ಇಶಾನ್ ಕಿಶನ್ ತಮ್ಮ ಕೈಗಳಲ್ಲಿ ಭದ್ರವಾಗಿ ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದರು. ಇದಕ್ಕಾಗಿ ಇಶಾನ್ ಕಿಶನ್ ವಿಕೆಟ್ ಹಿಂದಿನಿಂದ ಬಹು ದೂರ ಓಡಬೇಕಾಯಿತು. ಉಮ್ರಾನ್ ಮಲಿಕ್ ಎಸೆದ ಈ ಓವರ್ನಲ್ಲಿ ಚರಿತಾ ಅಸಲಂಕಾ ಚೆಂಡನ್ನು ಗಾಳಿಯಲ್ಲಿ ಹೊಡೆದರು. ಈ ಬಾಲ್ ಫೈನ್ ಲೆಗ್ ಕಡೆಗೆ ಹೋಯಿತು. ಆಗ ಡೀಪ್ನಲ್ಲಿ ನಿಂತಿದ್ದ ಹರ್ಷಲ್ ಪಟೇಲ್ ಕ್ಯಾಚ್ ಹಿಡಿಯಲು ಮುಂದೆ ಬಂದರು. ಆದರೆ, ಕ್ಯಾಚ್ ತೆಗೆದುಕೊಳ್ಳಲು ಓಡಿದ ಇಶಾನ್ ಕಿಶನ್ ಕೈಸನ್ನೆಯಲ್ಲಿಯೇ ಪಟೇಲ್ ಅವರನ್ನು ನಿಲ್ಲಿಸಿ, ಬಾಲ್ ಹಿಡಿದರು. ಇಶಾನ್ ಕಿಶನ್ ಹಿಡಿದ ಈ ಕ್ಯಾಚ್‌ಗೆ ಸಹ ಆಟಗಾರರ ಮಾತ್ರವಲ್ಲದೇ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.