ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರ ಆಟಕ್ಕೆ ಮನಸೋಲದವರಿಲ್ಲ. ಹಿಂದೊಮ್ಮೆ ಫಾರ್ಮ್ ಕೊರತೆಯಿಂದ ಕಳಪೆ ಪ್ರದರ್ಶನ ನೀಡುತ್ತಿದ್ದ ವಿರಾಟ್ ಮೇಲೆ ಎಲ್ಲರೂ ಮುಗಿಬಿದ್ದಿದ್ದರು. ಈಗ ಮತ್ತೆ ಮೈದಾನದಲ್ಲಿ ಅಬ್ಬರಿಸುತ್ತಿರುವ ವಿರಾಟ್ ಆಟಕ್ಕೆ ಗುಣಗಾನ ಶುರುವಾಗಿದೆ. 'ಭಾರತೀಯ ಬ್ಯಾಟರ್ ಕೊಹ್ಲಿಯನ್ನು ಯಾವುದೇ ಹಂತದಲ್ಲಿಯೂ ಅಳೆಯಲು ಸಾಧ್ಯವಿಲ್ಲ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಹೊಗಳಿದ್ದಾರೆ.
ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿರುವ ಅಕ್ಮಲ್, 'ಈಗಿನ ಕ್ರಿಕೆಟ್‌ನಲ್ಲಿ 45 ಶತಕ ಬಾರಿಸುವುದು ಅತಿ ಕಠಿಣ. ಅಂಥದ್ದರಲ್ಲಿ ವಿರಾಟ್ ಕೊಹ್ಲಿ ಏಕದಿನವೊಂದರಲ್ಲೇ 45 ಶತಕ ಬಾರಿಸಿದ್ದಾರೆ. ಒಟ್ಟಾರೆ, ವೃತ್ತಿ ಬದುಕಿನಲ್ಲಿ 73 ಶತಕದ ಶಿಖರ ನಿರ್ಮಿಸಿದ್ದಾರೆ. ಆತನ ಆಟವನ್ನು ಇಂತಿಷ್ಟೇ ಎಂದು ಅಳೆಯಲಾಗದು. ಇಷ್ಟು ಶತಕ ಬಾರಿಸಿದ್ದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಈಗಿನ ಕ್ರಿಕೆಟ್ನ ಅಧಿಪತಿ ಏಕೆ ಎಂಬುದನ್ನು ಆತ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆತ ನಿಜಕ್ಕೂ ವಿಶ್ವಕ್ರಿಕೆಟ್ನ ಅಚ್ಚರಿಯೇ ಸರಿ. ಶತಕಗಳನ್ನು ಬಾರಿಸಿ ದಾಖಲೆಗಳನ್ನು ಪುಡಿಗಟ್ಟುತ್ತಿರುವ ವಿರಾಟ್ ಆಟ ನಿಜಕ್ಕೂ ಅಚ್ಚರಿ ಮತ್ತು ಅದ್ಭುತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಭಾರತಕ್ಕೆ ಮಾತ್ರವಲ್ಲ, ವಿಶ್ವ ಕ್ರಿಕೆಟ್ನ ಸ್ಪೆಷಲ್ ಪ್ಲೇಯರ್ ಎಂದು ಬಣ್ಣಿಸಿರುವ ಅಕ್ಮಲ್, ಮೂರು ವರ್ಷಗಳಿಂದ ಫಾರ್ಮ್ಗಾಗಿ ಪರದಾಡುತ್ತಿದ್ದ ವಿರಾಟ್ ಬ್ಯಾಟ್ ಈಗ ಮತ್ತೆ ಮಾತನಾಡಲು ಶುರು ಮಾಡಿದೆ. ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿದ್ದು, ಆತನಲ್ಲಿ ಕ್ರಿಕೆಟ್ ಹಸಿವು ಇಂಗಿಲ್ಲ ಎಂಬುದನ್ನು ತೋರಿಸುತ್ತದೆ. ಲಯವನ್ನು ಮರು ಸಂಪಾದಿಸಿರುವ ವಿರಾಟ್ ಭಾರತ ಕ್ರಿಕೆಟ್ನ ನಿಜವಾದ ಫೈಟರ್. ಏಷ್ಯಾಕಪ್ ಮತ್ತು ವಿಶ್ವಕಪ್ ಪ್ರದರ್ಶನ ಅವರನ್ನು ಬದಲಾಯಿಸಿತು. ಭಾರತಕ್ಕೆ ಆತ ಎಷ್ಟು ಮುಖ್ಯ ಎಂಬುದು ಈಗ ಗೊತ್ತಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಲಯದ ಸಮಸ್ಯೆಯಿಂದಾಗಿ ಭಾರಿ ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ, ಈಗ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಟಿ20ಯಲ್ಲಿ 1, ಏಕದಿನದಲ್ಲಿ ಸತತ 2 ಶತಕಗಳೊಂದಿಗೆ 45 ಬಾರಿಸಿ ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ಬಳಿಕ ಎರಡನೇ ಅತ್ಯಧಿಕ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧ ಗುವಾಹಟಿಯಲ್ಲಿ ನಡೆದ ಈಚೆಗೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಅಬ್ಬರಿಸುವ ಮೂಲಕ 73 ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು.
ಈ ಪಂದ್ಯದಲ್ಲಿ 52 ಮತ್ತು 81 ರನ್ ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಬಳಸಿಕೊಂಡ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ಭಾರತ ಬೃಹತ್ ಮೊತ್ತ ಗಳಿಸಲು ನೆರವಾದರು. ಅಲ್ಲದೇ, ಇದು ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 45 ನೇ ಶತಕವಾಗಿದೆ. ಸಚಿನ್ ತೆಂಡೂಲ್ಕರ್ ಇದೇ ಮಾದರಿಯಲ್ಲಿ 49 ಶತಕಗಳನ್ನು ಬಾರಿಸಿದ್ದಾರೆ. ಇದನ್ನು ಸರಿಗಟ್ಟಲು ಕೊಹ್ಲಿಗೆ ಕೇವಲ ನಾಲ್ಕು ಶತಕ ಮಾತ್ರ ಬೇಕಿದೆ.
ಇದನ್ನೂ ಓದಿ:2023ರ ಐಪಿಎಲ್ ಮಿಸ್ ಮಾಡಿಕೊಳ್ಳಲಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಪಂತ್: ಗಂಗೂಲಿ