ಟಿ20 ಹೊಡಿಬಡಿ ಆಟವಾದರೂ ಕೆಲವೊಮ್ಮೆ ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡುವುದು ಬಹುಮುಖ್ಯವಾಗುತ್ತದೆ. ಇದು ನಿನ್ನೆಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಾಬೀತಾಯಿತು. ಬೌಲರ್ಗಳಿಗೆ ನೆರವಾಗುತ್ತಿದ್ದ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ಕೇವಲ 9 ರನ್ಗೆ 5 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು.
ಕೇಶವ್ ಮಹಾರಾಜ್, ಆ್ಯಡಂ ಮಾರ್ಕ್ರಮ್, ವೇಯ್ನ್ ಪಾರ್ನೆಲ್ರ ಉತ್ತಮ ಆಟದಿಂದ ಉಳಿದ 5 ವಿಕೆಟ್ಗಳಿಂದ 100 ರನ್ ಗಳಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೂ ಆರಂಭಿಕ ಆಘಾತ ಉಂಟಾಯಿತು. ಖಾತೆ ತೆರೆಯದೇ ಟಿ20 ಸ್ಪೆಷಲಿಸ್ಟ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ 3 ರನ್ಗೆ ಔಟಾಗಿದ್ದು, ಆತಂಕ ಮೂಡಿಸಿತ್ತು.
ವಿಕೆಟ್ ಬಿದ್ದರೂ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ಕೆ ಎಲ್ ರಾಹುಲ್ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೌಲಿಂಗ್ ಪಿಚ್ನಲ್ಲೂ ಹರಿಣಗಳ ಉರಿ ಚೆಂಡನ್ನು ಎದುರಿಸಿ ಅರ್ಧಶತಕ ಗಳಿಸಿದ್ದಲ್ಲದೇ, ಪಂದ್ಯ ಗೆಲ್ಲಿಸಿಕೊಟ್ಟರು. ರಾಹುಲ್ 51 ರನ್ ಗಳಿಸಲು ತೆಗೆದುಕೊಂಡಿದ್ದು 56 ಎಸೆತ. ವಿಕೆಟ್ ತಡೆಯುವುದೇ ಕಷ್ಟವಾಗಿದ್ದ ಮೈದಾನದಲ್ಲಿ ಸ್ಟ್ರೈಕ್ರೇಟ್ ಕಡಿಮೆಯಾದರೂ ಎಚ್ಚರಿಕೆಯಿಂದ ಆಡುವುದು ಹೇಗೆ ಎಂಬುದನ್ನು ರಾಹುಲ್ ತೋರಿಸಿಕೊಟ್ಟರು.
ರಾಹುಲ್ ತಾಳ್ಮೆಯ ಆಟವನ್ನು ಮಾಜಿ ಆಟಗಾರ ಆಕಾಶ್ ಚೋಪ್ರಾ ಹೊಗಳಿದ್ದಾರೆ. "ರಾಹುಲ್ ನಿಧಾನಗತಿ ಬ್ಯಾಟಿಂಗ್ ಟೀಕಿಸಿದ್ದು ಘೋರ ತಪ್ಪಾಗಿದೆ. ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಕೇವಲ 106 ರನ್ ಗಳಿಸಲು ಮಾತ್ರ ಶಕ್ತವಾಯಿತು. ಭಾರತ 2 ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದುಕೊಂಡಿತು. ಇದಕ್ಕೆ ಕಾರಣ ರಾಹುಲ್ ತಾಳ್ಮೆಯ ಬ್ಯಾಟಿಂಗ್, ಅದ್ಭುತವಾಗಿ ಆಡಿದಿರಿ" ಎಂದು ಎಂದು ಚೋಪ್ರಾ ಟ್ವೀಟ್ ಮಾಡಿದ್ದಾರೆ.