ಡಬ್ಲಿನ್ (ಐರ್ಲೆಂಡ್):ಮೂರು ಪಂದ್ಯಗಳ ಸರಣಿಯಲ್ಲಿ ಶುಕ್ರವಾರ ನಡೆದ ಮೊದಲ ಟಿ20ಯಲ್ಲಿ ಐರ್ಲೆಂಡ್ ವಿರುದ್ಧದ ಜಯದ ನಂತರ ನಾಯಕ ಬುಮ್ರಾ ಅವರು ಫಾರ್ಮ್ಗೆ ಮರಳಿರುವುದರ ಬಗ್ಗೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಪ್ರಶಂಸಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಬುಮ್ರಾ ಅವರ ಕಮ್ಬ್ಯಾಕ್ನ್ನು ಎದುರು ನೋಡುತ್ತಿದ್ದರು ಎಂದು ರವಿ ಅಭಿಪ್ರಾಯಪಟ್ಟಿದ್ದಾರೆ.
2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಬೆನ್ನು ನೋವಿಗೆ ಗುರಿಯಾದ ಜಸ್ಪ್ರೀತ್ ಬುಮ್ರಾ ಶಸ್ತ್ರಚಿಕಿತ್ಸೆಯ ನಂತರ ದೀರ್ಘಾವಧಿಯವರೆಗೆ ವಿಶ್ರಾಂತಿಯಲ್ಲಿದ್ದರು. ಇದರಿಂದಾಗಿ 2022 ರ ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು 16ನೇ ಐಪಿಎಲ್ ಆವೃತ್ತಿಯಿಂದ ಬುಮ್ರಾ ಅವರು ಹೊರಗುಳಿದಿದ್ದರು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿ ಬುಮ್ರಾ ನಾಯಕರಾಗಿ ತಂಡಕ್ಕೆ ಮರಳಿದ್ದಾರೆ. ಐಪಿಎಲ್ನಲ್ಲಿ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಯುವ ಪ್ರತಿಭೆಗಳ ತಂಡವನ್ನು ಐರ್ಲೆಂಡ್ನಲ್ಲಿ ಬುಮ್ರಾ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಮಳೆಯ ಅಡ್ಡಿಯ ನಂತರವೂ ಭಾರತ ಗೆಲುವು ದಾಖಲಿಸಿದೆ.
ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಬುಮ್ರಾ, ಮೊದಲ ಓವರ್ನಲ್ಲೇ ಇಂಪ್ರೆಸೀವ್ ಸ್ಪೆಲ್ ಮಾಡಿದರು. ಕೇವಲ 6 ರನ್ ಬಿಟ್ಟುಕೊಟ್ಟು, ಎರಡು ವಿಕೆಟ್ ಪಡೆದರು. ಬುಮ್ರಾ ಹಳೆಯ ಬೌಲಿಂಗ್ ಚಾರ್ಮ್ ಕಳೆದುಕೊಂಡಿಲ್ಲ ಎಂಬುದನ್ನು ಈ ಮೂಲಕ ಸಾಬೀತು ಮಾಡಿದರು. ಅಲ್ಲದೇ 4 ಓವರ್ ಮಾಡಿದ ಅವರು ಕೇವಲ 24 ರನ್ ಬಿಟ್ಟುಕೊಟ್ಟರು. 19ನೇ ಓವರ್ನಲ್ಲಿ 1 ರನ್ ಮಾತ್ರ ನೀಡಿ ಡೆತ್ ಓವರ್ನಲ್ಲೂ ನಿಯಂತ್ರಣ ಸಾಧಿಸಿದರು. ಭಾರತ ತಂಡ ಈ ವರ್ಷ ಏಷ್ಯಾಕಪ್, ಆಸ್ಟ್ರೇಲಿಯಾ ಸರಣಿ ಮತ್ತು ವಿಶ್ವಕಪ್ ಆಡಲಿದ್ದು, ಇದಕ್ಕೆ ಬುಮ್ರಾ ಅವರ ಕಮ್ಬ್ಯಾಕ್ ಇನ್ನಷ್ಟೂ ಉತ್ಸಾಹ ನೀಡಲಿದೆ.