ಭಾರತ ಕ್ರಿಕೆಟ್ ತಂಡ 2011ರ ವಿಶ್ವಕಪ್ ವಿಜಯವನ್ನು ಪುನರಾವರ್ತಿಸಲು ಪ್ರಯತ್ನಿಸಬೇಕು. ಈ ಮೂಲಕ ವಿರಾಟ್ ಕೊಹ್ಲಿಗಾಗಿ ಈ ಬಾರಿ ಟ್ರೋಫಿಯನ್ನು ಮನೆಗೆ ತರಲು ಪ್ರಯತ್ನಿಸಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾಗೆ ಕಿವಿಮಾತು ಹೇಳಿದ್ದಾರೆ. 2023ರ ವಿಶ್ವಕಪ್ ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಬಾರಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತವು ಶ್ರೀಲಂಕಾ ತಂಡವನ್ನು ಸೋಲಿಸಿ 2011ರ ವಿಶ್ವಕಪ್ ಅನ್ನು ತವರು ನೆಲದಲ್ಲಿ ಗೆದ್ದುಕೊಂಡಿತು. 2011ರ ವಿಶ್ವಕಪ್ ಪ್ರಸಿದ್ಧ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಕೊನೆಯ ವಿಶ್ವಕಪ್ ಆಗಿತ್ತು. 'ಮಾಸ್ಟರ್ ಬ್ಲಾಸ್ಟರ್'ಗಾಗಿ ತಂಡ ತನ್ನೆಲ್ಲ ಶಕ್ತಿ ಪ್ರದರ್ಶಿಸಿ ಅಂತಿಮವಾಗಿ ಕಪ್ ಗೆದ್ದುಕೊಂಡಿತ್ತು.
2011ರಲ್ಲಿ ವಿರಾಟ್ ಕೊಹ್ಲಿ ತಂಡದ ಸದಸ್ಯರಾಗಿದ್ದರು. ವಿಶ್ವ ಗೆದ್ದ ನಂತರ ಸಚಿನ್ ಅವರನ್ನು ವಿರಾಟ್ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದರು. ಸಚಿನ್ ನಿವೃತ್ತಿಯ ನಂತರ ಕೊಹ್ಲಿ ಭಾರತದ ಬ್ಯಾಟಿಂಗ್ ಘಟಕದ ಮುಖ್ಯಸ್ಥರಾಗಿ ಪರಿಣಾಮಕಾರಿಯಾಗಿ ಆಡುತ್ತಿದ್ದಾರೆ. ಆದರೆ, 2015 ಮತ್ತು 2019ರಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತ ಕಾರಣ ಕೊಹ್ಲಿ ಗೆಲುವಿನ ರುಚಿ ಅನುಭವಿಸಿಲ್ಲ. 2011ರ ತಂಡವು ಸಚಿನ್ ಅವರಿಗಾಗಿ ಗೆದ್ದಂತೆ ಕೊಹ್ಲಿಗಾಗಿ ವಿಶ್ವಕಪ್ ಗೆಲ್ಲಲು ಭಾರತ ತಂಡ ಎಲ್ಲ ಪರಿಶ್ರಮವನ್ನೂ ಹಾಕಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.