ಹೈದರಾಬಾದ್: ದುಬೈನ ಕೊಕೊ ಕೋಲಾ ಅರೆನಾದಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡಕ್ಕೆ 1.60 ಕೋಟಿ ರೂ.ಗೆ ಭಾರತ ಮತ್ತು ಸೌರಾಷ್ಟ್ರ ವೇಗಿ ಜಯದೇವ್ ಉನದ್ಕತ್ ಬಿಡ್ ಆದರು. ಕೋಟಿ ಮೊತ್ತಕ್ಕೆ ಬಿಡ್ ಆದ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ಉನಾದ್ಕತ್ ಇದು ತಮ್ಮ ವೃತ್ತಿಜೀವನದಲ್ಲಿ ನೂತನ ಹಂತ ಎಂದು ಹೇಳಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಐಪಿಎಲ್ ಆಟಗಾರ ಜಯದೇವ್ ಹೇಳಿದ್ದಾರೆ. "ನನಗೆ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಇರುವುದಕ್ಕೆ ತುಂಬಾ ಸಂತೋಷವಾಗಿದೆ. ಹರಾಜು ನಮಗೆ ಉತ್ತಮವಾಗಿತ್ತು. ಹರಾಜು ನನಗೆ ವಿಭಿನ್ನ ಅಂಶವಾಗಿದೆ. ಇದು ನನ್ನ ವೃತ್ತಿಜೀವನದಲ್ಲಿ ಹೊಸ ಹಂತವಾಗಿದೆ"ಎಂದು ಹರ್ಷಚಿತ್ತರಾಗಿ ಹೇಳಿದರು.
ಉನದ್ಕತ್ ಅವರಿಗೆ ಇಲ್ಲಿನ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣ ಹೊಸ ‘ಹೋಮ್‌ಗ್ರೌಂಡ್’ ಆಗಲಿದೆ. ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂ.ಗೆ ಸನ್‌ರೈಸಸ್ ಹೈದರಾಬಾದ್ ತಂಡಕ್ಕೆ ಸೇರಿಕೊಂಡಿದ್ದಾರೆ. ಅವರೊಂದಿಗೆ ಭಾರತಕ್ಕಾಗಿ ನಾಲ್ಕು ಟೆಸ್ಟ್ ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿರುವ ಉನಾದ್ಕತ್, ವಿಶ್ವಕಪ್ ವಿಜೇತ ನಾಯಕನೊಂದಿಗೆ ಆಡಲು ಮತ್ತು ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಎಡಗೈ ವೇಗಿ ಮತ್ತು ಬಲಗೈ ಬ್ಯಾಟರ್ ಆಗಿರುವ ಜಯದೇವ್ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಬ್ಯಾಟಿಂಗ್ ಸಾಥ್ ನೀಡಲಿದ್ದಾರೆ. "ನಾವು ಟ್ರೋಫಿ ಗೆಲ್ಲುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು 32 ವರ್ಷದ ಉನಾದ್ಕತ್ ಹೇಳಿದರು.