ಲಂಡನ್:2019 ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮೊರ್ಗನ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ನಾಯಕತ್ವ ತ್ಯಜಿಸಿ ಕ್ರಿಕೆಟ್‌ನಿಂದ ದೂರವುಳಿದಿದ್ದ ಕ್ರಿಕೆಟಿಗ ಈಗ ಅಧಿಕೃತವಾಗಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ತೊರೆದು ಸ್ಥಳೀಯ ಲೀಗ್ಗಳಲ್ಲಿ ತೊಡಗಿಸಿಕೊಂಡಿದ್ದ ಮೊರ್ಗನ್, ಇತ್ತೀಚೆಗೆ ಮುಕ್ತಾಯಗೊಂಡ SA20 ಲೀಗ್‌ನಲ್ಲಿ ಆಡಿದ್ದರು. 6 ಇನಿಂಗ್ಸ್ಗಳಲ್ಲಿ ಗರಿಷ್ಠ 64 ರನ್ಗಳೊಂದಿಗೆ 145.45 ಸ್ಟ್ರೈಕ್ ರೇಟ್‌ನಲ್ಲಿ 128 ರನ್‌ಗಳನ್ನು ಗಳಿಸಿದ್ದರು. ಐರ್ಲೆಂಡ್ ತಂಡದೊಂದಿಗೆ ಕ್ರಿಕೆಟ್ ವೃತ್ತಿ ಆರಂಭಿಸಿದ್ದ ಮೊರ್ಗಾನ್ ಬಳಿಕ ಇಂಗ್ಲೆಂಡ್ ತಂಡದ ನಾಯಕರಾಗಿ ಬೆಳೆದಿದ್ದರು.ತಮ್ಮ 16 ವರ್ಷಗಳ ಸುದೀರ್ಘ ವೃತ್ತಿಜೀವನದ ನಂತರ ಕಳೆದ ವರ್ಷ ಜುಲೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿಕೊಂಡಿದ್ದರು.
ಟ್ವೀಟ್ ಮಾಡಿ ನಿವೃತ್ತಿ ವಿಷಯ ಹಂಚಿಕೊಂಡಿರುವ ಮೊರ್ಗನ್, "ನಾನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಸಮಾಲೋಚನೆಯ ಬಳಿಕ ಆಟದಿಂದ ಹಿಂದೆ ಸರಿಯಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. 2005 ರಲ್ಲಿ ಇಂಗ್ಲೆಂಡ್‌ನ ಮಿಡ್ಲ್‌ಸೆಕ್ಸ್ ತಂಡ ಸೇರಿಕೊಂಡು ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದಾಗಿನಿಂದ ಹಿಡಿದು ಕೊನೆಯದಾಗಿ ಆಡಿದ SA20 ನಲ್ಲಿ ಪರ್ಲ್ ರಾಯಲ್ಸ್ ತಂಡದೊಂದಿಗಿನ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಪ್ರತಿಯೊಬ್ಬ ಕ್ರೀಡಾಪಟುವಿನ ವೃತ್ತಿಜೀವನದಲ್ಲಿ ಏರಿಳಿತಗಳು ಸಹಜ. ಯಾವುದೇ ಸಮಯದಲ್ಲೂ ನನ್ನ ಕುಟುಂಬ ನನ್ನೊಂದಿಗೆ ಇತ್ತು. ಬೇಷರತ್ತಾಗಿ ಬೆಂಬಲ ನೀಡಿದ ಆಪ್ತ ಸ್ನೇಹಿತರಿಗೆ ನಾನು ಧನ್ಯವಾದ ಸಲ್ಲಿಸುವೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತೇನೆ:ವಿದಾಯದ ಬಳಿಕ ನಾನು ಕ್ರಿಕೆಟ್ ಆಡುವುದನ್ನು ಕಳೆದುಕೊಳ್ಳಲಿದ್ದೇನೆ. ಕುಟುಂಬದೊಂದಿಗೆ ಸಮಯ ಕಳೆಯಲು ಇದು ಸಕಾಲವಾಗಿದೆ. ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸ್ ಪಂದ್ಯಾವಳಿಗಳಲ್ಲಿ ವೀಕ್ಷಕ ವಿವರಣೆಗಾರನಾಗಿ ಪ್ರಸಾರಕರ ಜೊತೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.