ಲಾರ್ಡ್ಸ್ (ಇಂಗ್ಲೆಂಡ್):'ಕ್ರಿಕೆಟ್ ಕಾಶಿ' ಖ್ಯಾತಿಯ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಿನ್ನೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 100 ರನ್‌ಗಳಿಂದ ಗೆದ್ದು ಬೀಗಿತು. ಇದಕ್ಕೂ ಮುನ್ನ, ಟಾಸ್ ಸೋತು ಬ್ಯಾಟಿಂಗ್‌ಗೆ ಮುಂದಾದ ಇಂಗ್ಲೆಂಡ್ 49 ಓವರ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಭಾರತಕ್ಕೆ 247 ರನ್ಗಳ ಟಾರ್ಗೆಟ್ ನೀಡಿತ್ತು. ಆಂಗ್ಲರು ಹೇಳಿಕೊಳ್ಳುವ ಬ್ಯಾಟಿಂಗ್ ಪ್ರದರ್ಶನ ನೀಡದೇ ಇದ್ದರೂ ಬೌಲಿಂಗ್‌ನಲ್ಲಿ ಭಾರತದ ವಿರುದ್ಧ ಸಂಪೂರ್ಣ ಹತೋಟಿ ಸಾಧಿಸಿದರು.
ಇಂಗ್ಲೆಂಡ್ ಇನ್ನಿಂಗ್ಸ್: ಮೊದಲು ಬ್ಯಾಟ್ ಮಾಡಿದ ಜೋಸ್ ಬಟ್ಲರ್ ತಂಡ ಭಾರತದ ಬೌಲರುಗಳ ದಾಳಿಯನ್ನು ಅರಿತುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಮತ್ತು ಬೈರ್ಸ್ಟೋ 41ರನ್ಗಳ ಜೊತೆಯಾಟವಾಡಿದರು. 23 ರನ್ಗಳಿಸಿದ್ದ ರಾಯ್, ಹಾರ್ದಿಕ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. 38 ರನ್ಗಳಿಕೆ ಮಾಡಿದ್ದ ಬೈರ್ಸ್ಟೋ ಕೂಡ ಚಹಲ್ ಓವರ್ನಲ್ಲಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋ ರೂಟ್ (11), ಸ್ಟೋಕ್ಸ್ (21) ಹಾಗೂ ಬಟ್ಲರ್ (4) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹೀಗಾಗಿ ತಂಡ 102 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇಂಗ್ಲೆಂಡ್ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಒಪ್ಪಿಸುತ್ತಾ ಇಕ್ಕಟ್ಟಿಗೆ ಸಿಲುಕಿದಾಗ ಲಿವಿಂಗ್ಸ್ಟೋನ್ (33), ಮೋಯಿನ್ ಅಲಿ (47) ಹಾಗೂ ವಿಲ್ಲೆ (41) ಆಸರೆಯಾದರು. ಹೀಗಾಗಿ ತಂಡ ಸ್ಪರ್ಧಾತ್ಮಕ ರನ್ಗಳಿಕೆ ಮಾಡಿತು. ಕೊನೆಯದಾಗಿ 49 ಓವರ್‌ಗಳಲ್ಲಿ ಸರ್ವ ಪತನದ ಕಂಡು 246 ರನ್ಗಳಿಕೆ ಮಾಡಿತು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಚಾಹಲ್ 4 ವಿಕೆಟ್ ಪಡೆದರೆ, ಬುಮ್ರಾ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಹಾಗೂ ಶಮಿ, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಕಿತ್ತರು.