ಬ್ರಿಸ್ಟೋಲ್: ಭಾರತ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದು, ಅತಿಥೇಯ ಇಂಗ್ಲೆಂಡ್ ವಿರುದ್ಧ 8 ವಿಕೆಟ್ಗಳಿಂದ ಹೀನಾಯ ಸೋಲು ಕಂಡಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಯಾವೊಬ್ಬ ಬ್ಯಾಟರ್ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.
ನಾಯಕಿ ಮಿಥಾಲಿ ರಾಜ್ 72 ರನ್ಗಳಿಸಿದರಾದರೂ ಅದಕ್ಕೆ ಅವರು ಬರೋಬ್ಬರಿ 108 ಎಸೆತಗಳನ್ನಾಡಿದ್ದು ದೊಡ್ಡ ಹಿನ್ನಡೆಯಾಯಿತು. ಸ್ಫೋಟಕ ಬ್ಯಾಟರ್ ಶೆಫಾಲಿ 15, ಅನುಭವಿಗಳಾದ ಮಂದಾನ 8 ಮತ್ತು ಹರ್ಮನ್ ಪ್ರೀತ್ ಕೌರ್ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದ್ದರಿಂದ ಭಾರತ ಚೇತರಿಸಿಕೊಳ್ಳಲಾಗಲಿಲ್ಲ.
ಪೂನಮ್ ರಾವುತ್ 61 ಎಸೆತಗಳಲ್ಲಿ 32, ದೀಪ್ತಿ ಶರ್ಮಾ 46 ಎಸೆತಗಳಲ್ಲಿ 30 ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಮಿಥಾಲಿಗೆ ನೆರವಾದರು. ಇಂಗ್ಲೆಂಡ್ ಮಹಿಳೆಯರ ಪರ ಕರಾರುವಾಕ್ ದಾಳಿ ನಡೆಸಿದ ಕ್ಯಾಥರಿನ್ ಬ್ರಂಟ್ 35ಕ್ಕೆ 2, ಅನ್ಯಾ ಶ್ರಬ್ಸೋಲ್ 33ಕ್ಕೆ 2, ಸೋಫಿ ಎಕ್ಲೆಸ್ಟೋನ್ 40ಕ್ಕೆ 3 ವಿಕೆಟ್ ಪಡೆದು ಭಾರತವನ್ನು 200ರ ಗಡಿಯಲ್ಲೇ ನಿಯಂತ್ರಿಸಿದರು.