ಆಕ್ಲೆಂಡ್: ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿಯಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ತಂಡವನ್ನು ಅಸಮರ್ಥ ತಂಡ ಎಂದು ಕರೆದಿರುವ ಕಿವೀಸ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್, ಈ ಸರಣಿಯಲ್ಲಿ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ಮಾತ್ರವಲ್ಲ, ಬೇರೆ ಯಾರೇ ಅವರ ಜಾಗದಲ್ಲಿದ್ದರೂ ರೂಟ್ ತಂಡದ ವಿರುದ್ಧ ಅದೇ ಫಲಿತಾಂಶವನ್ನು ಪಡೆಯುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ 5 ಪಂದ್ಯಗಳ ಆ್ಯಶಸ್ ಸರಣಿಯಲ್ಲಿ 4 - 0ಯಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದಿತ್ತು. ಆದರೆ, ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮುಖ್ಯ ಕೋಚ್ ಲ್ಯಾಂಗರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿತ್ತು.
51 ವರ್ಷದ ಮಾಜಿ ಆರಂಭಿಕ ಆಟಗಾರ ಆಸೀಸ್ ತಂಡ ದಕ್ಷಿಣ ಆಫ್ರಿಕಾದಲ್ಲಿ ಸ್ಯಾಂಡ್‌ಪೇಪರ್ - ಗೇಟ್ ಹಗರಣಕ್ಕೆ ಸಿಲುಕಿದ್ದ ನಂತರ ಕೋಚ್ ಹುದ್ದೆಗೇರಿದ್ದರು. ಲ್ಯಾಂಗರ್ ಸಂಕಷ್ಟದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ರಾಷ್ಟ್ರದ ವಿಶ್ವಾಸ ಮರಳಿ ಪಡೆಯುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದಿರುವ ಮೆಕಲಮ್, ಅವರ ಅವಧಿಯಲ್ಲಿ ತಂಡದ ಪ್ರದರ್ಶನ ಮಾತ್ರ ಹೇಳಿಕೊಳ್ಳುವಷ್ಟು ಪ್ರಭಾವಶಾಲಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಲ್ಯಾಂಗರ್ ರಾಜೀನಾಮೆ ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ತಲ್ಲಣ ಮೂಡಿಸಿತ್ತು. ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ಆ್ಯಡಂ ಗಿಲ್ಕ್ರಿಸ್ಟ್, ಶೇನ್ ವಾರ್ನ್ ಸೇರಿದಂತೆ ಲ್ಯಾಂಗರ್ ಅವರ ಸಮಕಾಲೀನರು ಕ್ರಿಕೆಟ್ ಆಸ್ಟ್ರೇಲಿಯಾ ಮಾಜಿ ಆರಂಭಿಕನನ್ನು ನಡೆಸಿಕೊಂಡ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಲ್ಯಾಂಗರ್ ಅವರ ಕೋಚ್ ಅವಧಿ ಈ ವರ್ಷದ ಜೂನ್ಗೆ ಅಂತ್ಯವಾಗುತ್ತಿತ್ತು. ಆದರೆ, ಅವರು ಟಿ-20 ವಿಶ್ವಕಪ್ ಮತ್ತು ಆ್ಯಶಸ್ ಯಶಸ್ಸಿನಿಂದ ದೀರ್ಘಾವಧಿಯ ಒಪ್ಪಂದದ ಕಡೆ ಎದುರು ನೋಡುತ್ತಿದ್ದರು, ಆದರೆ, ಸಿಇ ಕೇವಲ 2022ರ ಟಿ-20 ವಿಶ್ವಕಪ್ವರೆಗೆ ಮುಂದುವರಿಸಲು ಮಾತ್ರ ಬಯಸಿತ್ತು, ಈ ಕಾರಣದಿಂದ ಅವರು ಒಪ್ಪದೇ ರಾಜೀನಾಮೆ ನೀಡಿದ್ದರು.