ಬೆಂಗಳೂರು: ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನ ಪ್ರಶಸ್ತಿಯ ರೇಸ್‌ನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಇಂದು ಮುಖಾಮುಖಿಯಾಗಲಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ. ಏಕದಿನ ಮಾದರಿಯಲ್ಲಿ ಸಿಂಹಳೀಯರ ವಿರುದ್ಧ ಪಾರಮ್ಯ ಮೆರೆದಿದ್ದರೂ ಸಹ ವಿಶ್ವಕಪ್ ಎಂದಾಕ್ಷಣ ಅದೊಂದು ಭಯ ಆಂಗ್ಲರನ್ನು ಕಾಡುತ್ತಿದೆ.
ಏಕದಿನ ಮಾದರಿಯಲ್ಲಿ ಉಭಯ ತಂಡಗಳು 78 ಬಾರಿ ಮುಖಾಮುಖಿಯಾಗಿದ್ದು, ಆ ಪೈಕಿ 38 ಬಾರಿ ಇಂಗ್ಲೆಂಡ್ ಜಯ ಸಾಧಿಸಿದರೆ 36 ಬಾರಿ ಸಿಂಹಳೀಯರು ಪ್ರಾಬಲ್ಯ ಮೆರೆದಿದ್ದಾರೆ. ಒಂದು ಪಂದ್ಯ ಟೈನಲ್ಲಿ ಹಾಗೂ 3 ಪಂದ್ಯಗಳು ಫಲಿತಾಂಶ ಕಾಣದೆ ಅಂತ್ಯವಾಗಿವೆ. ವಿಶ್ವ ಸಮರದಲ್ಲಿ ಉಭಯ ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು, 6 ಬಾರಿ ಇಂಗ್ಲೆಂಡ್ ಜಯ ಗಳಿಸಿದರೆ, 5 ಬಾರಿ ಶ್ರೀಲಂಕಾ ಗೆದ್ದು ಬೀಗಿದೆ. ಆದರೆ ಕಳೆದ ನಾಲ್ಕು ಏಕದಿನ ವಿಶ್ವಕಪ್‌ನಲ್ಲಿ ಸಿಂಹಳೀಯರು ಆಂಗ್ಲರ ವಿರುದ್ಧ ಮೇಲುಗೈ ಸಾಧಿಸಿದ್ದಾರೆ. 1999ರ ನಂತರ ಶ್ರೀಲಂಕಾ ವಿರುದ್ಧ ವಿಶ್ವಕಪ್‌ನಲ್ಲಿ ಆಂಗ್ಲರಿಗೆ ವಿಜಯಲಕ್ಷ್ಮಿ ಒಲಿದಿಲ್ಲ.
ವಿಶ್ವಕಪ್‌ನಲ್ಲಿ ಎರಡು ತಂಡಗಳ ಗೆಲುವು ಸೋಲು
- 1983ರಲ್ಲಿ ಕೌಂಟಿ ಗ್ರೌಂಡ್, ಟೌಂಟನ್ನಲ್ಲಿ ಇಂಗ್ಲೆಂಡ್‌ಗೆ 47 ರನ್‌ಗಳ ಜಯ, ಹೆಡಿಂಗ್ಲೆ, ಲೀಡ್ಸ್ನಲ್ಲಿ ಇಂಗ್ಲೆಂಡ್‌ಗೆ 9 ವಿಕೆಟ್‌ಗಳ ಜಯ
- 1987ರಲ್ಲಿ ಅರ್ಬಾದ್ ನಿಯಾಜ್ ಸ್ಟೇಡಿಯಂ, ಪೇಶಾವರ್ನಲ್ಲಿ ಡಿಆರ್ಎಸ್ ನಿಯಮಾನುಸಾರ ಇಂಗ್ಲೆಂಡ್‌ಗೆ ಜಯ
ನೆಹರು ಸ್ಟೇಡಿಯಂ, ಪುಣೆ- ಇಂಗ್ಲೆಂಡ್‌ಗೆ 8 ವಿಕೆಟ್‌ಗಳ ಜಯ - 1992ರಲ್ಲಿ ಈಸ್ಟರ್ನ್ ಓವಲ್, ಬಲಾರತ್ನಲ್ಲಿ ಇಂಗ್ಲೆಂಡ್‌ಗೆ 106 ರನ್‌ಗಳ ಜಯ
- 1996ರಲ್ಲಿ ಇಕ್ಬಾಲ್ ಸ್ಟೇಡಿಯಂ, ಫೈಸಲಾಬಾದ್ನಲ್ಲಿ ಶ್ರೀಲಂಕಾಗೆ 5 ವಿಕೆಟ್‌ಗಳ ಜಯ
- 1999ರಲ್ಲಿ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್, ಲಂಡನ್ನಲ್ಲಿ ಇಂಗ್ಲೆಂಡ್‌ಗೆ 8 ವಿಕೆಟ್‌ಗಳ ಜಯ
- 2007ರಲ್ಲಿ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ಆ್ಯಂಟಿಗುವಾದಲ್ಲಿ ಶ್ರೀಲಂಕಾಗೆ 2 ರನ್‌ಗಳ ಜಯ
- 2011ರಲ್ಲಿ ಆರ್.ಪ್ರೇಮದಾಸ ಸ್ಟೇಡಿಯಂ, ಕೊಲಂಬೋದಲ್ಲಿ ಶ್ರೀಲಂಕಾಗೆ 10 ವಿಕೆಟ್‌ಗಳ ಜಯ
- 2015ರಲ್ಲಿ ವೆಸ್ಟ್ ಪ್ಯಾಕ್ ಸ್ಟೇಡಿಯಂ, ವೆಲ್ಲಿಂಗ್ಟನ್ನಲ್ಲಿ ಶ್ರೀಲಂಕಾಗೆ 9 ವಿಕೆಟ್‌ಗಳ ಜಯ
- 2019 ಹೆಡಿಂಗ್ಲೆ ಸ್ಟೇಡಿಯಂ, ಲೀಡ್ಸ್ನಲ್ಲಿ ಶ್ರೀಲಂಕಾಗೆ 20 ರನ್‌ಗಳ ಜಯ
ಬರೋಬ್ಬರಿ ಎರಡು ದಶಕಗಳಿಂದ ವಿಶ್ವ ಸಮರದಲ್ಲಿ ಸಿಂಹಳೀಯರ ವಿರುದ್ಧ ಜಯ ಸಾಧಿಸಲು ವಿಫಲವಾಗುತ್ತಿರುವ ಆಂಗ್ಲರಿಗೆ ಇಂದು ಮತ್ತೊಮ್ಮೆ ಸಿಂಹಳೀಯರು ಎದುರಾಗುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಕಳೆದ ನಾಲ್ಕು ವಿಶ್ವಕಪ್‌ನಲ್ಲಿ ಎದರಿಸಿದ ಅವಮಾನಕ್ಕೆ ಇಂಗ್ಲೆಂಡ್ ಪ್ರತೀಕಾರ ತೀರಿಸಿಕೊಳ್ಳಲಿದೆಯಾ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.
ಇದನ್ನೂ ಓದಿ:ವಿಶ್ವಕಪ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಇಂಗ್ಲೆಂಡ್ Vs ಶ್ರೀಲಂಕಾ ಫೈಟ್