ಸಿಡ್ನಿ(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಗೆಲ್ಲುವ ಮೂಲಕ ಇಂಗ್ಲೆಂಡ್ 2ನೇ ತಂಡವಾಗಿ ಸೆಮಿಫೈನಲ್ಗೇರಿತು. ಈ ಮೂಲಕ ಹಾಲಿ ಚಾಂಪಿಯನ್, ವಿಶ್ವಕಪ್ ಆಯೋಜಿಸಿರುವ ಆಸ್ಟ್ರೇಲಿಯಾವನ್ನು ಟೂರ್ನಿಯಿಂದ ಹೊರದಬ್ಬಿತು.
ಸೆಮಿಫೈನಲ್ ಹಣಾಹಣಿಯಲ್ಲಿ ಚುರುಕಿನ ಆಟವಾಡಿದ ಇಂಗ್ಲೆಂಡ್ ಶ್ರೀಲಂಕಾವನ್ನು 141 ರನ್ಗೆ ಕಟ್ಟಿಹಾಕಿತು. ಗುರಿ ಬೆನ್ನತ್ತಿದ್ದ ಮಾಜಿ ಚಾಂಪಿಯನ್ ತಂಡ 2 ಎಸೆತ ಬಾಕಿ ಉಳಿಸಿ 4 ವಿಕೆಟ್ಗಳಿಂದ ಜಯ ಸಾಧಿಸಿತು. ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್ ಬಳಿಕ ಎರಡನೇ ತಂಡವಾಗಿ ಸೆಮಿಫೈನಲ್ ಟಿಕೆಟ್ ಖಾತ್ರಿ ಪಡಿಸಿಕೊಂಡಿತು.
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ಔಪಚಾರಿಕ ಪಂದ್ಯದಲ್ಲಿ ಇಂಗ್ಲೆಂಡ್ಗೆ ಸವಾಲಾಗಲಿಲ್ಲ. ಸ್ಪಿನ್ನರ್ ಆದಿಲ್ ರಶೀದ್ರ ಬಿಗು ದಾಳಿ, ಮಾರ್ಕ್ವುಡ್ರ ಮಾರಕ ವೇಗದಿಂದ ತತ್ತರಿಸಿದ ಲಂಕಾ 8 ವಿಕೆಟ್ಗೆ 141 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಇಂಗ್ಲೆಂಡ್ ಬೆನ್ಸ್ಟೋಕ್ಸ್, ಅಲೆಕ್ಸ್ ಹೇಲ್ಸ್ರ ಹೋರಾಟದಿಂದ 6 ವಿಕೆಟ್ಗೆ 144 ರನ್ ಗಳಿಸಿ, 2 ಎಸೆತ ಬಾಕಿ ಇರುವಂತೆಯೇ ಗೆಲುವಿನ ಪಟಾಕಿ ಸಿಡಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾಗೆ ಇಂಗ್ಲೆಂಡ್ ಬೌಲರ್ಗಳ ಬಿಗಿ ದಾಳಿ ಮಾರಕವಾಯಿತು. ರನ್ ಗಳಿಸಲು ಪರದಾಡಿದ ತಂಡಕ್ಕೆ ಪಥುಮ್ ನಿಸ್ಸಂಕರ ಅರ್ಧಶತಕ ಬಾರಿಸಿ ಬಲ ನೀಡಿದರು. 45 ಎಸೆತಗಳಲ್ಲಿ 5 ಸಿಕ್ಸರ್, 2 ಬೌಂಡರಿ ಬಾರಿಸಿಗಳಿಂದ 67 ರನ್ ಗಳಿಸಿದರು. ಕುಸಾಲ್ ಮೆಂಡಿಸ್ 18, ರಾಜಪಕ್ಸ 22 ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ರನ್ ಗಳಿಸಿದೇ ಪೆವಿಲಿಯನ್ ಸೇರಿದರು. ಇಂಗ್ಲೆಂಡ್ ತಂಡದ ಸ್ಪಿನ್ನರ್ 4 ಓವರ್ ಕೋಟಾದಲ್ಲಿ ಕೇವಲ 16 ರನ್ ನೀಡಿ ಕಾಡಿದರು. ಮಾರ್ಕ್ವುಡ್ 3 ವಿಕೆಟ್ ಕಿತ್ತರು.
ಗೆಲ್ಲಲೇಕಿದ್ದ ಪಂದ್ಯದ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ಪಡೆಗೆ ಅಲೆಕ್ಸ್ ಹೇಲ್ಸ್ ಮತ್ತು ನಾಯಕ ಜೋಸ್ ಬಟ್ಲರ್ ಅದ್ಭುತ ಆರಂಭ ನೀಡಿದರು. ಮೊದಲ ವಿಕೆಟ್ಗೆ 75 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಬಟ್ಲರ್ 28, ಅಲೆಕ್ಸ್ ಹೇಲ್ಸ್ 47, ಬೆನ್ ಸ್ಟೋಕ್ಸ್ ಔಟಾಗದೇ 42 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.