ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಭಾಗವಾಗಿ ಇಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಶ್ ಬಟ್ಲರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಲಂಕಾ ಆಟಗಾರರಿಗೆ ಬೌಲಿಂಗ್ ಮಾಡುವಂತೆ ಆಹ್ವಾನ ನೀಡಿದ್ದಾರೆ. ಉಭಯ ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದರಿಂದ ಇಂದಿನ ಕಾದಾಟ ಉಭಯ ತಂಡಗಳಿಗೂ ಬಹಳ ಮಹತ್ವದ್ದಾಗಿದೆ. ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ.
ಈವರೆಗೆ ಆಡಿರುವ ತಲಾ ನಾಲ್ಕು ಪಂದ್ಯಗಳ ಪೈಕಿ ಒಂದೊಂದು ಗೆಲುವು ಪಡೆದಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಸೆಮಿಫೈನಲ್ ಅಂಗಳದಲ್ಲಿ ಉಳಿಯಬೇಕಿದ್ದರೆ ಬಹುತೇಕ ಬಾಕಿ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿವೆ. ಯಾವುದಾದರೊಂದು ತಂಡ ಇಂದಿನ ಪಂದ್ಯವನ್ನು ಗೆದ್ದು ಸೆಮಿಫೈನಲ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ಆದರೆ, ಯಾವ ತಂಡಕ್ಕೆ ಆ ಭಾಗ್ಯ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ. ಈ ಹಿಂದಿನ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ 345 ರನ್ ಸಿಡಿಸಿದರೂ ಪಂದ್ಯವನ್ನು ಉಳಿಸಿಕೊಳ್ಳದಿರುವುದು ದುರಂತವಾದರೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನದ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದು ಅಷ್ಟೇ ಅಚ್ಚರಿ.
ಇನ್ನು ಇಂಗ್ಲೆಂಡ್ ಮತ್ತು ಶ್ರೀಲಂಕಾ ಇದುವರೆಗೆ ಒಟ್ಟು 78 ಏಕದಿನ ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ ಇಂಗ್ಲೆಂಡ್ 38 ಮತ್ತು ಶ್ರೀಲಂಕಾ 36 ಪಂದ್ಯಗಳನ್ನು ಗೆದ್ದಿವೆ. ಈ ಎರಡು ತಂಡಗಳ ನಡುವಿನ 3 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿಲ್ಲ. 1 ಪಂದ್ಯ ಮಾತ್ರ ಡ್ರಾದಲ್ಲಿ ಅಂತ್ಯಗೊಂಡಿದೆ.