ಪುಣೆ (ಮಹಾರಾಷ್ಟ್ರ): ಬೆನ್ ಸ್ಟೋಕ್ಸ್ ಶತಕ, ಡೇವಿಡ್ ಮಲನ್, ಕ್ರಿಸ್ ವೋಕ್ಸ್ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ನಿಗದಿ ಓವರ್ ಅಂತ್ಯಕ್ಕೆ 9 ವಿಕೆಟ್ ಗಳನ್ನು ಕಳೆದುಕೊಂಡು 339 ರನ್ ಕಲೆಹಾಕಿದೆ. ವಿಶ್ವಕಪ್ನಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಲು ಇಂಗ್ಲೆಂಡ್ 340 ರನ್ಗಳ ಗುರಿಯನ್ನು ರಕ್ಷಿಸಿಕೊಳ್ಳಬೇಕಿದೆ. ಕ್ರಿಕೆಟ್ ಶಿಶುಗಳ ವಿರುದ್ಧ ಕ್ರಿಕೆಟ್ ಜನಕರ ನಾಡಿನ ತಂಡ ಗೆದ್ದಲ್ಲಿ ಅಂಕಪಟ್ಟಿಯಲ್ಲಿ 10 ರಿಂದ 9ಕ್ಕೆ ಏರಿಕೆ ಕಾರಣಲಿದೆ.
ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಮಾತ್ರ ಗೆದ್ದು 6 ಪಂದ್ಯಗಳನ್ನು ಕಳೆದುಕೊಂಡಿದೆ. ಬಲಿಷ್ಠ ತಂಡಗಳ ಮುಂದೆ ಮಂಡಿಯೂರಿರುವ ಆಂಗ್ಲರಿಗೆ ಕ್ರಿಕೆಟ್ ಶಿಶುಗಳಾದ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದ್ದಾರೆ. ಸತತ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಇಂದು ಪುಣೆ ಮೈದಾನದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆಡುತ್ತಿದೆ. ನವೆಂಬರ್ 11 ರಂದು ಪಾಕಿಸ್ತಾನದ ವಿರುದ್ಧ ಕೋಲ್ಕತ್ತಾದಲ್ಲಿ ಆಡಲಿದೆ. ಈ ಎರಡೂ ಪಂದ್ಯಗಳಲ್ಲಿ ಬಟ್ಲರ್ ಪಡೆ ಗೆದ್ದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶ ಪಡೆಯುವ ಅವಕಾಶ ಸಿಕ್ಕರೂ ಸಿಗಬಹುದು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ಗೆ ಡಚ್ ಬೌಲಿಂಗ್ ವಿಭಾಗ ಕಾಡದೇ ಬಿಡಲಿಲ್ಲ. ಬಿರುಸಿನ ಆರಂಭ ಪಡೆದ ಆಂಗ್ಲರಿಗೆ ಆರ್ಯನ್ ದತ್ತ್ ಮೊದಲ ಶಾಕ್ ನೀಡಿದರು. 15 ರನ್ ಗಳಿಸಿ ಆಡುತ್ತಿದ್ದ ಜಾನಿ ಬೈರ್‌ಸ್ಟೋವ್ ಮತ್ತೆ ಮುಗ್ಗರಿಸಿದರು. ಎರಡನೇ ವಿಕೆಟ್ಗೆ ಡೇವಿಡ್ ಮಲನ್ ಮತ್ತು ಜೋ ರೂಟ್ 85 ರನ್ಗಳ ಪಾಲುದಾರಿಕೆ ಮಾಡಿದರು. ಬೇಸ್ ಬಾಲ್ ನೀತಿಯನ್ನು ಬಿಟ್ಟು, ಸಾಮಾನ್ಯ ಪಂದ್ಯವನ್ನು ಆಡಿದ ಫಲವಾಗಿ ಜೊತೆಯಾಟ ಬಂತು. 7ನೇ ಓವರ್ಗೆ 48 ರನ್ ಗಳಿಸಿದ್ದ ತಂಡ 21ನೇ ಓವರ್ಗೆ ಕೇವಲ 133 ರನ್ ಕಲೆಹಾಕಿತ್ತು. ಅಷ್ಟರ ಮಟ್ಟಿಗೆ ತಾಳ್ಮೆಯಿಂದ ಮಲನ್ ಮತ್ತು ರೂಟ್ ಬ್ಯಾಟ್ ಮಾಡಿದ್ದರು. ಜೋ ರೂಟ್ (28) ವಿಕೆಟ್ ಬೆನ್ನಲ್ಲೇ, ಅರ್ಧಶತಕ ಮಾಡಿದ್ದ ಡೇವಿಡ್ ಮಲನ್ ರನ್ಔಟ್ಗೆ ಬಲಿಯಾದರು. ಇನ್ನಿಂಗ್ಸ್ನಲ್ಲಿ 74 ಬಾಲ್ ಆಡಿದ ಮಲನ್ 10 ಬೌಂಡರಿ ಮತ್ತು 2 ಸಿಕ್ಸ್ನ ಸಹಾಯದಿಂದ 87 ರನ್ ಕಲೆಹಾಕಿದರು.