ಬರ್ಮಿಂಗ್ಹ್ಯಾಮ್(ಎಡ್ಜ್‌ಬಾಸ್ಟನ್): ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಇಂದಿನಿಂದ 5ನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ನಿರ್ಧಾರ ಕೈಗೊಂಡಿದೆ. ಕಳೆದ ವರ್ಷ ನಡೆದ ಈ ಸರಣಿಯಲ್ಲಿ ಈಗಾಗಲೇ ಟೀಂ ಇಂಡಿಯಾ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಭಾರತ ಸರಣಿ ಗೆಲ್ಲಲು ಈ ಪಂದ್ಯದಲ್ಲಿ ಡ್ರಾ ಅಥವಾ ಗೆಲುವು ಸಾಧಿಸುವುದು ಅನಿವಾರ್ಯ.
ಇಂಗ್ಲೆಂಡ್ ತಂಡ ಹೀಗಿದೆ:ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಆಲಿ ಪೋಪ್, ಜೋ ರೂಟ್, ಜೊನಾಥನ್ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ಕ್ಯಾಪ್ಟನ್), ಸ್ಯಾಮ್ ಬಿಲ್ಲಿಂಗ್ಸ್(ವಿ.ಕೀ), ಮ್ಯಾಥ್ಯೂ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ನಿಟ್ಟಿನಿಂದ ಟೀಂ ಇಂಡಿಯಾ ಪ್ರಮುಖ ಅಸ್ತ್ರಗಳೊಂದಿಗೆ ಮೈದಾನಕ್ಕಿಳಿದಿದೆ. ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿದ್ದು ಸಿರಾಜ್, ಶಾರ್ದೂಲ್, ಶಮಿ ಹಾಗೂ ನಾಯಕ ಬುಮ್ರಾ ಇದ್ದಾರೆ. ಏಕೈಕ ಆಲ್ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ ಶಕ್ತಿಯಾಗಿದ್ದಾರೆ.
ಟೀಂ ಇಂಡಿಯಾ ಹೀಗಿದೆ: ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರಾ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ). ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಸಿರಾಜ್, ಜಸ್ಪ್ರೀತ್ ಬುಮ್ರಾ(ಕ್ಯಾಪ್ಟನ್)
ಟೆಸ್ಟ್ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್ ದೃಢಪಟ್ಟಿರುವ ಕಾರಣ ಯಾರ್ಕರ್ ಕಿಂಗ್ ಬುಮ್ರಾಗೆ ತಂಡ ಮುನ್ನಡೆಸುವ ಅಪೂರ್ವ ಅವಕಾಶ ಸಿಕ್ಕಿದೆ. ಈ ಮೂಲಕ ಕಪಿಲ್ ದೇವ್ ಬಳಿಕ ಅಂದರೆ 35 ವರ್ಷಗಳ ಬಳಿಕ ಭಾರತದ ಟೆಸ್ಟ್ ತಂಡಕ್ಕೆ ವೇಗಿಯೋರ್ವರು ನಾಯಕರಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಓವಲ್‌ನಲ್ಲಿ ನಡೆದಿದ್ದ 4ನೇ ಟೆಸ್ಟ್ ಪಂದ್ಯದ ವೇಳೆ ತಂಡದ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಶ್ರೀಧರ್, ಫಿಸಿಯೋ ಸೇರಿದಂತೆ ಹಲವರಿಗೆ ಕೋವಿಡ್ ತಗುಲಿತ್ತು. ಹೀಗಾಗಿ, 5ನೇ ಪಂದ್ಯ ರದ್ದುಗೊಳಿಸಿ, ಪ್ಲೇಯರ್ಸ್ ಸ್ವದೇಶಕ್ಕೆ ವಾಪಸ್ ಆಗಿದ್ದರು.