ಲೀಡ್ಸ್(ಇಂಗ್ಲೆಂಡ್):ಪ್ರವಾಸಿ ಭಾರತದ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಪಡೆ 432ರನ್ಗಳಿಗೆ ಆಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 354 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಕೊಹ್ಲಿ ಪಡೆ ಬ್ಯಾಟಿಂಗ್ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿ, ಕೇವಲ 78 ರನ್ಗಳಿಗೆ ಆಲೌಟ್ ಆಗಿತು. ಬೌಲಿಂಗ್ನಲ್ಲಿ ಮಿಂಚಿದ ಇಂಗ್ಲೆಂಡ್ ತಂಡದ ಆ್ಯಂಡರ್ಸನ್, ಓವರ್ಟೊನ್ ತಲಾ 3 ವಿಕೆಟ್ ಪಡೆದರೆ, ರಾಬಿನ್ಸನ್ ಹಾಗೂ ಸ್ಯಾಮ್ ಕರ್ರನ್ ತಲಾ 2 ವಿಕೆಟ್ ಕಿತ್ತು ತಂಡಕ್ಕೆ ಮೇಲುಗೈ ತಂದು ಕೊಟ್ಟಿದ್ದರು.
78 ರನ್ಗಳಿಗೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ ಇಂಗ್ಲೆಂಡ್ 132.2 ಓವರ್ಗಳ ಆಟವಾಡಿ 432ರನ್ಗಳಿಸಿದೆ. ಆರಂಭದಲ್ಲೇ ಉತ್ತಮ ಆಟವಾಡಿದ ಬರ್ನ್ಸ್(61), ಹಮೀದ್ (68) ತಂಡಕ್ಕೆ ಬದ್ರಬುನಾದಿ ಹಾಕಿಕೊಟ್ಟರು. ಇದಾದ ಬಳಿಕ ಬಂದ ಮಲನ್ ಕೂಡ 70 ರನ್ಗಳಿಕೆ ಮಾಡಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು.
ಕ್ಯಾಪ್ಟನ್ ರೂಟ್ ಆಕರ್ಷಕ(121ರನ್) ಶತಕ ಸಿಡಿಸಿ, ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾದರು. ಇವರಿಗೆ ಬ್ಯಾರಿಸ್ಟೋ(29ರನ್) ಹಾಗೂ ಮಲನ್ ಉತ್ತಮ ಸಾಥ್ ನೀಡಿದರು. ಉಳಿದಂತೆ ಓವರ್ಟೋನ್ ಕೂಡ 32ರನ್ ಗಳಿಸಿದರು.
ವಿಕೆಟ್ ಪಡೆದು ಸಂಭ್ರಮಿಸಿದ ಟೀಂ ಇಂಡಿಯಾ
ಭಾರತದ ಪರ ಶಮಿ 4 ವಿಕೆಟ್ ಪಡೆದುಕೊಂಡರೆ, ಬುಮ್ರಾ, ಸಿರಾಜ್ ಹಾಗೂ ಜಡೇಜಾ ತಲಾ 2 ವಿಕೆಟ್ ಕಿತ್ತರು. ಟೀಂ ಇಂಡಿಯಾ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಮೂರು ದಿನಗಳ ಆಟ ಬಾಕಿ ಇರುವ ಕಾರಣ ಕೊಹ್ಲಿ ಪಡೆ ಯಾವ ರೀತಿಯಾಗಿ ಬ್ಯಾಟ್ ಮಾಡಲಿದೆ ಎಂಬುದು ಪ್ರಮುಖವಾಗಿದೆ.