ದಿ ಓವೆಲ್(ಇಂಗ್ಲೆಂಡ್): ಪ್ರವಾಸಿ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ್ದು, 25 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 110 ರನ್ಗಳಿಕೆ ಮಾಡಿದೆ. ಈ ಮೂಲಕ ರೋಹಿತ್ ಪಡೆ ಗೆಲುವಿಗೆ 111ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಬುಮ್ರಾ ಮೊದಲ ಓವರ್ನಲ್ಲೇ ಆಘಾತ ನೀಡಿದರು. ತಾವು ಎಸೆದ ಮೊದಲ ಓವರ್ನಲ್ಲಿ ಜಾಸನ್ ರಾಯ್(0) ವಿಕೆಟ್ ಪಡೆದುಕೊಂಡರು. ಇದರ ಬೆನ್ನಲ್ಲೇ ಜೋ ರೂಟ್(0) ಕೂಡ ಬುಮ್ರಾಗೆ ಬಲಿಯಾದರು. ಇದರ ಬೆನ್ನಲ್ಲೇ ಮೈದಾನಕ್ಕೆ ಬಂದ ಸ್ಟೋಕ್ಸ್(0) ಕೂಡ ಬುಮ್ರಾ ಓವರ್ನಲ್ಲಿ ಖಾತೆ ತೆರೆಯುವುದಕ್ಕೂ ಮೊದಲೇ ಪೆವಿಲಿಯನ್ ಸೇರಿಕೊಂಡರು.
ಟೆಸ್ಟ್ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ಬೈರ್ಸ್ಟೋ(7)ರನ್ಗಳಿಕೆ ಮಾಡಿ ಬುಮ್ರಾಗೆ ಬಲಿಯಾದರೆ, ಲಿವಿಗ್ಸ್ಟೋನ್(0) ಔಟಾದರು. ಹೀಗಾಗಿ, ಇಂಗ್ಲೆಂಡ್ ತಂಡ 26 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಕ್ಯಾಪ್ಟನ್ ಬಟ್ಲರ್ ಹಾಗೂ ಮೊಯಿನ್ ಅಲಿ ಸ್ವಲ್ಪ ಹೊತ್ತು ಜೊತೆಯಾಟ ಆಡಿದರು. ಆದರೆ, 14ರನ್ಗಳಿಕೆ ಮಾಡಿದ್ದಾಗ ಪ್ರಸಿದ್ಧ್ ಕೃಷ್ಣ ಎಸೆದ ಓವರ್ನಲ್ಲಿ ಮೊಯಿನ್ ವಿಕೆಟ್ ಒಪ್ಪಿಸಿದರು. 30ರನ್ಗಳಿಕೆ ಮಾಡಿದ್ದ ಬಟ್ಲರ್ ಕೂಡ ಶಮಿಗೆ ಔಟಾದರು.
ಕೊನೆಯದಾಗಿ ಡೇವಿಡ್ ವಿಲ್ಲಿ(21) ಓವರ್ಟೊನ್(8), ಕೇರ್ಸ್(15)ರನ್ಗಳಿಕೆ ಮಾಡಿ, ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ತಂಡ ಕೊನೆಯದಾಗಿ 25.2 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 110ರನ್ಗಳಿಕೆ ಮಾಡಿತು.