ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪ್ರತಿಕ್ರಿಯಿಸಿದ್ದಾರೆ. ಮೊದಲ ಪಂದ್ಯದ ಸೋಲಿನ ಹಿನ್ನೆಲೆಯಲ್ಲಿ ನಾವು ನಮ್ಮ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ. ತಂಡದಲ್ಲಿ ಪವರ್ ಹಿಟ್ಟರ್ಸ್ ಹಾಗೂ ಖ್ಯಾತ ಆಟಗಾರರು ಇರುವುದೇ ಇದಕ್ಕೆ ಕಾರಣ ಎಂದು ಐಯ್ಯರ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಲಷ್ಟೆ ಶಕ್ತವಾಗಿತ್ತು. ಭಾರತ ತಂಡ ನೀಡಿದ ಸುಲಭದ ಮೊತ್ತ ಬೆನ್ನಟ್ಟಿದ ಮಾರ್ಗನ್ ನೇತೃತ್ವದ ಆಂಗ್ಲ ಪಡೆ ಕೇವಲ 15.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತ್ತು.
"ಭಾರತ ತಂಡದ ವಿಚಾರಕ್ಕೆ ಬಂದಾಗ ನೀವು ಯಾವ ಬ್ಯಾಟಿಂಗ್ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತೀರಿ ಎಂದು ತಿಳಿದುಕೊಂಡು ಅದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಯಾವುದೇ ಬದಲಾವಣೆಗಳನ್ನ ಮಾಡಿಲ್ಲ. ನೀವು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೀರಿ ಎಂಬುದಕ್ಕೆ ಮನಸ್ಥಿತಿ ಮುಖ್ಯವಾಗುತ್ತದೆ. ಪರಿಸ್ಥಿತಿಯನ್ನ ನೋಡಿಕೊಂಡು ಆಡುವುದು ತಂಡಕ್ಕೆ ಮುಖ್ಯವಾಗುತ್ತದೆ" ಎಂದಿದ್ದಾರೆ.