ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಮತ್ತೆ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. ಮೊದಲ ಪಂದ್ಯದಲ್ಲಿ ಡಕ್ ಔಟ್ ಆಗಿ ನಿರಾಸೆ ಮೂಡಿಸಿದ್ದ ಕಿಂಗ್ ಕೊಹ್ಲಿ, ಹಲವು ಟೀಕೆಗಳಿಗೆ ಗುರಿಯಾಗಿದ್ದರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2ನೇ ಟಿ-20 ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿ ಗೆಲುವಿಗೆ ಕಾರಣರಾಗಿದ್ದ ವಿರಾಟ್, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಒಂದೇ ದಿನ ಎರಡು ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ 3,000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಇತ್ತ ನಾಯಕನಾಗಿ ವೇಗವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12,000 ರನ್ ಗಳಿಸಿದ ಮೊದಲ ನಾಯಕ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.