ಅಹಮದಾಬಾದ್: ಉತ್ತರಾಖಂಡ ಪೊಲೀಸರು, ಭಾರತದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಡಕ್ ಔಟ್ ಆಗಿದ್ದ ಪ್ರಸಂಗವನ್ನು ತಮ್ಮ ಸುರಕ್ಷಿತ ವಾಹನ ಚಾಲನೆಯ ಜಾಗೃತಿ ಸಂದೇಶ ಮೂಡಿಸಲು ಬಳಸಿಕೊಂಡಿದ್ದಾರೆ.
ಮೊದಲ ಟಿ-20 ಪಂದ್ಯದಲ್ಲಿ, ತ್ವರಿತ ರನ್ ಸೇರಿಸುವ ಪ್ರಯತ್ನದಲ್ಲಿ ಕೊಹ್ಲಿ ಬೇಡದ ಹೊಡೆತ ಹೊಡೆಯಲು ಹೋಗಿ ಡಕ್ಔಟ್ ಆದರು. ಮೂರನೇ ಓವರ್‌ನಲ್ಲಿ ಆದಿಲ್ ರಶೀದ್ ಅವರ ಎಸೆತದಲ್ಲಿ ಕೊಹ್ಲಿ ಕ್ರಿಸ್ ಜೋರ್ಡಾನ್ ಗೆ ಕ್ಯಾಚ್ ನೀಡಿ ಪವಿಲಿಯನ್ ಸೇರಿದರು. ಆಗ ಭಾರತ ತಂಡ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಕೇವಲ 3 ರನ್ ಗಳಿಸಿತ್ತು.
"ವಾಹನ ಚಲಾಯಿಸಲು ಹೆಲ್ಮೆಟ್ ಅಷ್ಟೆ ಸಾಕಾಗುವುದಿಲ್ಲ! ಪೂರ್ಣ ಪ್ರಜ್ಞೆಯಲ್ಲಿ ವಾಹನ ಚಲಾಯಿಸುವುದು ಅವಶ್ಯಕ, ಇಲ್ಲದಿದ್ದರೆ ನೀವು ಕೊಹ್ಲಿಯಂತೆ ಶೂನ್ಯಕ್ಕೆ ಔಟಾಗಬಹುದು" ಎಂದು ಉತ್ತರಾಖಂಡ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದಿದ್ದಾರೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಟಿ -20 ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಇಯೊನ್ ಮೋರ್ಗಾನ್ ನೇತೃತ್ವದ ಇಂಗ್ಲೆಂಡ್ ತಂಡ 1-0 ಮುನ್ನಡೆ ಸಾಧಿಸಿದೆ.
ಓದಿ : ಬುಮ್ರಾ ದಾಖಲೆ ಮುರಿದ ಚಹಾಲ್: ಟಿ-20ಯಲ್ಲಿ ಈ ರೆಕಾರ್ಡ್ ಸಾಧನೆ