ಚೆನ್ನೈ:ಸತತ ವೈಫಲ್ಯಗಳಿಂದ ಲಯಕ್ಕೆ ಮರಳಿದ ರೋಹಿತ್ ಶರ್ಮಾ ಅವರ ಅಮೋಘ ಶತಕದ (161) ನೆರವಿನಿಂದ ಎರಡನೇ ಟೆಸ್ಟ್ನ ಮೊದಲ ದಿನದಾಟದ ಮುಕ್ತಾಯಕ್ಕೆ ಭಾರತ ಉತ್ತಮ ಮೊತ್ತ ಪೇರಿಸಿದೆ. ಪ್ರಥಮ ಇನ್ನಿಂಗ್ಸ್ನ ಮೊದಲ ದಿನಕ್ಕೆ 6 ವಿಕೆಟ್ ಕಳೆದುಕೊಂಡು 300 ರನ್ ಗಳಿಸಿರುವ ಭಾರತ, ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.
ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದ ಶುಭ್ಮನ್ ಗಿಲ್ ಇಂದಿನ ಪಂದ್ಯದಲ್ಲಿ ಒಲಿ ಸ್ಟೋನ್ ಬೌಲಿಂಗ್ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.
ಗಿಲ್ ಔಟಾದರೂ ಏಕದಿನದಂತೆ ಬ್ಯಾಟ್ ಬೀಸಿದ ರೋಹಿತ್ ಶರ್ಮಾಗೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ ತಕ್ಕ ಮಟ್ಟಿಗೆ ಸಾಥ್ ನೀಡಿದರು. ಈ ಇಬ್ಬರ ನಡುವೆ 85 ರನ್ ಮೂಡಿ ಬಂದಿದ್ದ ಸಂದರ್ಭದಲ್ಲಿ ಪೂಜಾರ 21 ರನ್ ಗಳಿಸಿದ್ದಾಗ ಜಾಕ್ ಲೀಚ್ ಬೌಲಿಂಗ್ನಲ್ಲಿ ಬೆನ್ಸ್ಟೋಕ್ಸ್ಗೆ ಕ್ಯಾಚಿತ್ತರು.
ನಂತರ ಕ್ರೀಸ್ಗೆ ಬಂದ ನಾಯಕ ವಿರಾಟ್ ಕೊಹ್ಲಿ ಬೃಹತ್ ಇನ್ನಿಂಗ್ಸ್ ಕಟ್ಟಿಕೊಡುವ ನಿರೀಕ್ಷೆಯನ್ನು ಹುಸಿಗೊಳಿಸಿದರು. ಪೂಜಾರ ನಿರ್ಗಮನದ ನಂತರ ಮೊಯಿನ್ ಅಲಿ ಎಸೆದ ಅದ್ಭುತ ಬೌಲಿಂಗ್ಗೆ ಕೊಹ್ಲಿ ಕ್ಲೀನ್ ಬೋಲ್ಡ್ ಆದರು. 5 ಎಸೆತಗಳನ್ನು ಎದುರಿದ ಕೊಹ್ಲಿ ಸೊನ್ನೆ ಸುತ್ತಿದರು. ಅಲ್ಲದೇ, ವರ್ಷದ ನಂತರ ಕ್ರೀಡಾಂಗಣಕ್ಕೆ ಮರಳಿದ್ದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದರು. ಆಗ ತಂಡದ ಮೊತ್ತ ಮೂರು ವಿಕೆಟ್ಗೆ 86 ರನ್ ಆಗಿತ್ತು.
ಸತತ ವಿಕೆಟ್ಗಳು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತದ ತಂಡಕ್ಕೆ ರೋಹಿತ್ ಶರ್ಮಾ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿ ತಮ್ಮ ವೃತ್ತಿ ಜೀವನದಲ್ಲಿ 7ನೇ ಟೆಸ್ಟ್ ಶತಕವನ್ನು ಪೂರೈಸಿದರು. ಅಲ್ಲದೇ, ಆಂಗ್ಲರನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ತಂಡವನ್ನು ಮುನ್ನಡೆಸಿದರು. ಅವರಿಗೆ 9 ಬೌಂಡರಿಗಳಿಂದ 67 ರನ್ ಗಳಿಸಿದ ರಹಾನೆ ಸಾಥ್ ನೀಡಿದರು. ಉಪನಾಯಕ ಅಜಿಂಕ್ಯ ರಹಾನೆ ನಡುವೆ 162 ರನ್ಗಳ ಜೊತೆಯಾಟ ಮೂಡಿಬಂತು. ಈ ನಡುವೆ ಶರ್ಮಾ 150ರ ಗಡಿ ದಾಟಿದರು.
ಬೃಹತ್ ಇನ್ನಿಂಗ್ಸ್ ಕಟ್ಟುತ್ತಿದ್ದ ರೋಹಿತ್ಗೆ ಜಾಕ್ ಲೀಚ್ ಅಡ್ಡಿಯಾದರು. 161 ರನ್ ಗಳಿಸಿದ್ದ ಶರ್ಮಾ ಲೀಚ್ ಬೌಲಿಂಗ್ನಲ್ಲಿ ಮೊಯಿನ್ ಅಲಿಗೆ ಕ್ಯಾಚ್ ನೀಡಿದರು. ಅವರ ಇನ್ನಿಂಗ್ಸ್ನಲ್ಲಿ 18 ಬೌಂಡರಿಗಳು ಮತ್ತು 2 ಸಿಕ್ಸರ್ ಮೂಡಿ ಬಂದಿವೆ. ಶರ್ಮಾ ನಿರ್ಗಮಿಸಿದ ನಂತರ ಮೊಯಿನ್ ಅಲಿ ಓವರ್ನಲ್ಲಿ ರಹಾನೆ (67) ಬೋಲ್ಡ್ ಆದರು. ನಂತರ ಆರ್.ಅಶ್ವಿನ್ ಕೂಡ 13 ರನ್ ಗಳಿಸಿ ರೂಟ್ ಬೌಲಿಂಗ್ನಲ್ಲಿ ಔಟಾದರು. ಸದ್ಯ ಕ್ರೀಸ್ನಲ್ಲಿ ರಿಷಬ್ ಪಂತ್ (33), ಟೆಸ್ಟ್ಗೆ ಪದಾರ್ಪಣೆ ಮಾಡಿರುವ ಅಕ್ಷರ್ ಪಟೇಲ್ (5) ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪರ ಜಾಕ್ ಲೀಚ್, ಮೊಯಿನ್ ಅಲಿ ತಲಾ 2 ವಿಕೆಟ್, ಒಲಿಸ್ಟೋನ್, ಜೋ ರೂಟ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 227 ರನ್ ಅಂತರದ ಬೃಹತ್ ಗೆಲುವು ದಾಖಲಿಸಿರುವ ಇಂಗ್ಲೆಂಡ್ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.