ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಬಳಿಕ ಮುಂದಿನ ಟೆಸ್ಟ್ ಪಂದ್ಯಕ್ಕೆ 'ಸರಿಯಾದ ಮನಸ್ಥಿತಿಯುಳ್ಳ ಸೂಕ್ತ ಆಟಗಾರರನ್ನು ಕರೆತರುವ ಅವಶ್ಯಕತೆಯಿದೆ' ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಚೇತೇಶ್ವರ ಪೂಜಾರ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 54 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದರು. ಒಂದು ರನ್ ಸಂಪಾದಿಸಲು 35 ಬಾಲ್ಗಳನ್ನು ನುಂಗಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 80 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಟೀಂ ಇಂಡಿಯಾಗೆ ದೊಡ್ಡ ಆಘಾತ ನೀಡಿದ್ದರು.
ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಕೆಲವು ಆಟಗಾರರು ರನ್ ಗಳಿಸಲು ಪ್ರಯತ್ನ ಪಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಈ ವೇಳೆ ಅವರು ತಂಡದ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸಲಿಲ್ಲ. ನಮ್ಮ ತಂಡವನ್ನು ಬಲಪಡಿಸಲು ಅಗತ್ಯವಾದ ವಿಷಯಗಳು ಯಾವುವು ಎಂಬುದರ ಕುರಿತು ಚರ್ಚಿಸುತ್ತೇವೆ. ಈ ಬಗ್ಗೆ ಮರು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸುತ್ತೇವೆ. ಈ ಹಿಂದೆ ಅನುಸರಿಸಿದ ಕೆಲವು ಮಾದರಿಗಳನ್ನು ಅನುಸರಿಸುವುದಿಲ್ಲ. ಇದಕ್ಕಾಗಿ ವರ್ಷಗಟ್ಟಲೆ ಕಾಯುವುದಿಲ್ಲ. ನಮ್ಮ ವೈಟ್ ಬಾಲ್ ತಂಡದ ಹುಡುಗರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲ ಬದಲಾವಣೆಗಳು ಬೇಕಿವೆ ಎಂದರು.