ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ 3-2 ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ವಶ ಪಡಿಸಿಕೊಂಡಿದೆ.
ಹಲವು ಬದಲಾವಣೆಯೊಂದಿಗೆ 5 ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ, ಕೆ.ಎಲ್. ರಾಹುಲ್ಗೆ ಕೊಕ್ ನೀಡಿ ಟಿ. ನಟರಾಜನ್ಗೆ ಚಾನ್ಸ್ ನಿಡಲಾಗಿತ್ತು. ಈ ಪಂದ್ಯದಲ್ಲಿ 6 ಬೌಲರ್ಗಳನ್ನು ಕಣಕ್ಕಿಳಿಸಿದ ಭಾರತ ತಂಡ ಪಕ್ಕಾ ಪ್ಲಾನ್ ಮೂಲಕ ಅಖಾಡಕ್ಕಿಳಿದಿತ್ತು.
ರಾಹುಲ್ಗೆ ಅವಕಾಶ ನೀಡದ ಕಾರಣ ರೋಹಿತ್ ಶರ್ಮಾ ಜೊತೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದರು. ಈ ಜೋಡಿ ಟೀಮ್ ಇಂಡಿಯಾಗೆ ಭದ್ರ ಬುನಾದಿ ಹಾಕಿತ್ತು. ಈ ಜೋಡಿ ಮೊದಲ ವಿಕೆಟ್ಗೆ 94 ರನ್ಗಳ ಜೊತೆಯಾಟವಾಡಿತ್ತು. ಹಿಟ್ ಮ್ಯಾನ್ ರೋಹಿತ್ ಶರ್ಮಾ 64 ರನ್ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ ಅಜಯ 80 ರನ್ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾಗಿದ್ದರು.
ಪಂದ್ಯ ಆರಂಭಕ್ಕೂ ಮುಂಚೆ ವಿರಾಟ್ ಕೊಹ್ಲಿ ಮಾತನಾಡಿ "ಅನಿರೀಕ್ಷಿತವಾಗಿ ಕೆ.ಎಲ್. ರಾಹುಲ್ ಐದನೇ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ ಹಾಗೂ ರೋಹಿತ್ ಶರ್ಮಾ ಜತೆ ನಾನೇ ಇನಿಂಗ್ಸ್ ಆರಂಭಿಸಲಿದ್ದೇನೆ. ಸೂರ್ಯಕುಮಾರ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತೇವೆ. ಗಾಯದಿಂದ ಕಳೆದ ಪಂದ್ಯಗಳಿಂದ ಹೊರಗುಳಿದಿದ್ದ ಟಿ.ನಟರಾಜನ್ ಅಂತಿಮ 11ಕ್ಕೆ ಮರಳಲಿದ್ದಾರೆ. ಆ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡದ ಸಂಯೋಜನೆ ಉತ್ತಮವಾಗಿದೆ," ಎಂದು ಕೊಹ್ಲಿ ಹೇಳಿದ್ದರು.