ಬೆಂಗಳೂರು:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ.ಫೆ. 5ರಿಂದ ಆರಂಭವಾಗಲಿರುವ ಈ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ.
2013ರಿಂದ ಸತತ 12 ಸರಣಿ ಜಯ: ತವರಿನಲ್ಲಿ ಸತತ 12 ಸರಣಿ ಜಯಿಸಿರುವ ಭಾರತ, ಮತ್ತೊಂದು ಗೆಲುವಿನ ತವಕದಲ್ಲಿದೆ. 2013ರಿಂದ ಆರಂಭವಾದ ಈ ಓಟ ಈವರೆಗೂ ನಿಂತಿಲ್ಲ. ವಿಂಡೀಸ್, ಆಸೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ತಂಡಗಳ ಎದುರು ತಲಾ 2 ಬಾರಿ, ಇಂಗ್ಲೆಂಡ್, ಆಫ್ಘಾನಿಸ್ತಾನ, ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧ ತಲಾ 1 ಬಾರಿ ಸರಣಿ (ಭಾರತದಲ್ಲಿ) ಗೆದ್ದಿದೆ. ಆದರೆ ನಾಳೆಯಿಂದ ಆರಂಭವಾಗಲಿರುವ 13ನೇ ಸರಣಿಯಲ್ಲಿ ಸೋಲಿಲ್ಲದ ಸರದಾರ ಗೆಲ್ಲುತ್ತಾನೋ, 2016ರಲ್ಲಿ 4-0 ಅಂತರದಲ್ಲಿ ಸರಣಿ ಸೋತಿದ್ದ ಆಂಗ್ಲರು ಸೇಡು ತೀರಿಸಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.
ದಾಖಲೆಗಳನ್ನು ಸರಿಗಟ್ಟಲು ಕೊಹ್ಲಿ ಸಜ್ಜು: ಕಿಂಗ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಬಾರಿಸಿ 14 ತಿಂಗಳೇ ಕಳೆದಿದೆ. 2020ರಲ್ಲಿ ಒಂದು ಶತಕವನ್ನೂ ಬಾರಿಸದ ಕೊಹ್ಲಿ, ಈ ಸರಣಿಯಲ್ಲಿ ನೂರರ ಗಡಿ ದಾಟುವ ಉತ್ಸುಕದಲ್ಲಿದ್ದಾರೆ. ಕೊನೆಯ ಬಾರಿಗೆ ವಿರಾಟ್ ಸೆಂಚುರಿ ಹೊಡೆದಿದ್ದು 2019ರ ನ. 22ರಂದು ಬಾಂಗ್ಲಾದೇಶದ ವಿರುದ್ಧ ಕೊಲ್ಕತ್ತಾದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ನಲ್ಲಿ. ಅಂದು 136 ರನ್ ಗಳಿಸಿದ್ದರು. ಅದೇ ರೀತಿ ಏಕದಿನದಲ್ಲೂ ವಿಂಡೀಸ್ ಎದುರಿನ ಪಂದ್ಯದಲ್ಲಿ ಅಜೇಯ 114 ರನ್ ಹೊಡೆದಿದ್ದೇ ಕೊನೆಯ ಶತಕ. ಈ ಪಂದ್ಯ 2019ರ ಆಗಸ್ಟ್ನಲ್ಲಿ ನಡೆದಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 70 ಶತಕ ಹೊಡೆದಿರುವ ವಿರಾಟ್ ಅತಿಹೆಚ್ಚು ಸೆಂಚುರಿ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ (100 ಶತಕ), ಎರಡನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್ (71) ಇದ್ದಾರೆ. ಪಾಂಟಿಂಗ್ರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿಗೆ ಕೇವಲ 2 ಶತಕ ಬೇಕಿದೆಯಷ್ಟೆ. ಹೀಗಾಗಿ ಕೊಹ್ಲಿ ಈ ವರ್ಷ ಆಡಲಿರುವ ಮೊದಲ ಸರಣಿಯಲ್ಲಿ ಶತಕದ ಬಾರಿಸುವ ಉತ್ಸುಕದಲ್ಲಿದ್ದಾರೆ.
ದಿಗ್ಗಜ್ಜರ ದಾಖಲೆ ಸರಿಗಟ್ಟುತ್ತಾರಾ ಕೊಹ್ಲಿ?
ನಾಯಕ ವಿರಾಟ್ ಕೊಹ್ಲಿ ಇನ್ನೊಂದು ಪಂದ್ಯದಲ್ಲಿ ಗೆದ್ದರೆ, ತವರಿನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿಯಲಿದ್ದಾರೆ. ಭಾರತದಲ್ಲಿ ಧೋನಿ 60 ಪಂದ್ಯಗಳಲ್ಲಿ 21, ಕೊಹ್ಲಿ 56 ಪಂದ್ಯಗಳ ಪೈಕಿ 20 ಟೆಸ್ಟ್ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈವರೆಗೂ 27 ಶತಕ ಬಾರಿಸಿರುವ ಕೊಹ್ಲಿ, ಮೂರು ಸೆಂಚುರಿ ಹೊಡೆದರೆ ಆಸ್ಟ್ರೇಲಿಯಾ ದಿಗ್ಗಜ ಬ್ರಾಡ್ಮನ್ (29 ಶತಕ) ದಾಖಲೆ ಮುರಿಯಲಿದ್ದಾರೆ.
ಹಾಗೆಯೇ ಸರಣಿಯಲ್ಲಿ ಕೊಹ್ಲಿ 3 ಶತಕ ಬಾರಿಸಿದರೆ ಇಂಗ್ಲೆಂಡ್ ವಿರುದ್ಧ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸಚಿನ್ ಮತ್ತು ದ್ರಾವಿಡ್ ತಲಾ 7 ಶತಕ ಬಾರಿಸಿದ್ದು, ಕೊಹ್ಲಿ 5 ಶತಕ ಹೊಡೆದಿದ್ದಾರೆ. ಇನ್ನು 73 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿಂಡೀಸ್ ದಂತಕತೆ ಬ್ರಿಯಾನ್ ಲಾರಾ ದಾಖಲೆ ಸರಿಗಟ್ಟಲಿದ್ದಾರೆ. ಲಾರಾ 22,358 ರನ್, ಕೊಹ್ಲಿ 22,286 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯರಲ್ಲಿ ದ್ರಾವಿಡ್ 3ನೇ ಸ್ಥಾನದಲ್ಲಿದ್ದು, ಅವರನ್ನು ಹಿಂದಿಕ್ಕಲು ಕೊಹ್ಲಿಗೆ 381 ರನ್ ಬೇಕಿದೆ. ದ್ರಾವಿಡ್ 21 ಪಂದ್ಯಗಳಲ್ಲಿ 1950 ರನ್ ಗಳಿಸಿದ್ದರೆ, ಕೊಹ್ಲಿ 19 ಪಂದ್ಯಗಳಲ್ಲಿ 1570 ರನ್ ಕಲೆಹಾಕಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಸಚಿನ್ (2535), ಕಪಿಲ್ ದೇವ್ (2483) ಇದ್ದಾರೆ. ಕೊಹ್ಲಿ 157 ರನ್ ಗಳಿಸಿದರೆ, ಆಂಗ್ಲರ ವಿರುದ್ಧ ಸಾವಿರ ರನ್ ಬಾರಿಸಿದ ಮೂರನೇ ಆಟಗಾರನಾಗಲಿದ್ದಾರೆ (ಭಾರತೀಯ). ಗವಾಸ್ಕರ್ (1331) ಮೊದಲ ಸ್ಥಾನದಲ್ಲಿದ್ದರೆ, ಜಿ.ಆರ್.ವಿಶ್ವನಾಥ್ (1022) ಎರಡನೇ ಸ್ಥಾನದಲ್ಲಿದ್ದಾರೆ.
ಇಶಾಂತ್ ನೂರರ ಸನಿಹ:ಈ ಸರಣಿಯಲ್ಲಿ ವೇಗಿ ಇಶಾಂತ್ ಶರ್ಮಾ ಮೂರು ಪಂದ್ಯವಾಡಿದರೆ ಇಂಡಿಯಾ ಪರ 100 ಟೆಸ್ಟ್ ಆಡಿದ 11ನೇ ಆಟಗಾರನಾಗಲಿದ್ದಾರೆ. ಮತ್ತು 2ನೇ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ. ಈವರೆಗೂ ಇಶಾಂತ್ 97 ಪಂದ್ಯಗಳನ್ನು ಆಡಿದ್ದಾರೆ. 131 ಟೆಸ್ಟ್ ಆಡಿರುವ ಕಪಿಲ್ ದೇವ್ ಮೊದಲ ಆಟಗಾರ. ಅಲ್ಲದೆ ಇನ್ನು 3 ವಿಕೆಟ್ ಕಬಳಿಸಿದರೆ 300 ವಿಕೆಟ್ಗನ್ನೂ ಪೂರೈಸಲಿದ್ದಾರೆ. ಈ ದಾಖಲೆ ಬರೆಯುವ ಭಾರತದ 3ನೇ ವೇಗಿ (ಕಪಿಲ್ ದೇವ್-434 ವಿಕೆಟ್, ಜಹೀರ್ ಖಾನ್- 311) ಮತ್ತು 6ನೇ ಭಾರತೀಯ ಆಗಲಿದ್ದಾರೆ.
400 ವಿಕೆಟ್ಗಳತ್ತ ಅಶ್ವಿನ್:74ಟೆಸ್ಟ್ ಪಂದ್ಯಗಳನ್ನಾಡಿರುವಸ್ಪಿನ್ನರ್ ಆರ್.ಅಶ್ವಿನ್ 377 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಈ ಸರಣಿಯಲ್ಲಿ ಇನ್ನು 23 ವಿಕೆಟ್ಗಳನ್ನು ಕಿತ್ತರೆ 400 ವಿಕೆಟ್ಗಳನ್ನು ಕಬಳಿಸಿದ ಭಾರತದ 4ನೇ ಆಟಗಾರ ಮತ್ತು ವಿಶ್ವದ 16ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಇನ್ನು ತವರಿನಲ್ಲಿ ಹರ್ಭಜನ್ ಸಿಂಗ್ 265 ವಿಕೆಟ್ಗಳನ್ನು ಪಡೆದಿದ್ದು, ಅಶ್ವಿನ್ ಇನ್ನು 13 ವಿಕೆಟ್ ಕಬಳಿಸಿದರೆ ಈ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಲಿದ್ದಾರೆ. ಮೊದಲ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಇದ್ದಾರೆ.
ರೂಟ್ಗೆ 100ನೇ ಪಂದ್ಯ:ಇತ್ತ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ಗೆ 100ನೇ ಪಂದ್ಯ ಇದಾಗಿದೆ. ಮತ್ತೊಂದು ವಿಶೇಷ ಎಂದರೆ ರೂಟ್ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದು ಕೂಡ ಭಾರತದ ಎದುರೇ. ಈಗ ನೂರನೇ ಪಂದ್ಯವನ್ನೂ ಬ್ಲೂ ಜೆರ್ಸಿ ಎದುರೇ ಆಡುತ್ತಿದ್ದಾರೆ. 100 ಪಂದ್ಯವಾಡಿದ ಇಂಗ್ಲೆಂಡ್ನ 15ನೇ ಆಟಗಾರ ಆಗಲಿದ್ದಾರೆ. 99 ಟೆಸ್ಟ್ಗಳನ್ನು ಆಡಿರುವ ರೂಟ್, 8249 ರನ್ ಗಳಿಸಿದ್ದು, ಈ ಮೂಲಕ ಇಂಗ್ಲೆಂಡ್ನ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ 10ನೇ ಆಟಗಾರನಾಗಲಿದ್ದಾರೆ.