ಕರ್ನಾಟಕ

karnataka

ETV Bharat / sports

ಡಾನ್​ ಬ್ರಾಡ್ಮನ್​ ದಾಖಲೆ ಮುರಿದ ಜೋ ರೂಟ್: 2ನೇ ದಿನದಾಂತ್ಯಕ್ಕೆ ಇಂಗ್ಲೆಂಡ್​ 555/8

ಮೊದಲನೇ ದಿನದಿಂದಲೂ ಭಾರತದ ವೇಗಿಗಳನ್ನು ಕಾಡಿದ ರೂಟ್​ 218 ರನ್ ಬಾರಿಸಿ, ಸ್ಪಿನ್ನರ್​ ಶಹಬಾದ್​ ನದೀಮ್​ ಬೌಲಿಂಗ್​​ನಲ್ಲಿ ಎಲ್​ಬಿಗೆ ಬಲಿಯಾದರು. ಅವರ ಈ ದ್ವಿಶತಕದ ಆಟದಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್​ ಸೇರಿವೆ..

Root gets 200 again
ಜೋ ರೂಟ್

By

Published : Feb 6, 2021, 5:22 PM IST

Updated : Feb 6, 2021, 6:59 PM IST

ಚೆನ್ನೈ:ಭಾರತದ ಎದುರಿನ ಮೊದಲ ಟೆಸ್ಟ್​​​ನ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ನಾಯಕ ಜೋ ರೂಟ್​ ತನ್ನ 100ನೇ ಪಂದ್ಯದಲ್ಲಿ ಬಾರಿಸಿದ ದಾಖಲೆಯ ದ್ವಿಶತಕದ ನೆರವಿನಿಂದ ತಂಡವು ಪ್ರಥಮ ಇನ್ನಿಂಗ್ಸ್​​ನಲ್ಲಿ ಪಾರಮ್ಯ ಮೆರೆದಿದೆ.

2ನೇ ದಿನದ ಮುಕ್ತಾಯಕ್ಕೆ ಪ್ರಥಮ ಇನ್ನಿಂಗ್ಸ್​ನಲ್ಲಿ 8 ವಿಕೆಟ್​ ಕಳೆದುಕೊಂಡು 555 ರನ್​ ಗಳಿಸಿರುವ ಇಂಗ್ಲೆಂಡ್​, ಡಿಕ್ಲೇರ್​ ಘೋಷಿಸದೆ ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿದೆ. ಡಾಮಿನಿಕ್​ ಬೇಸ್​ ಹಾಗೂ ಜಾಕ್​ ಲೀಚ್​ ನಾಳಿನ ಆಟಕ್ಕೆ ಬ್ಯಾಟಿಂಗ್​ ಉಳಿಸಿಕೊಂಡಿದ್ದಾರೆ.

ಮೊದಲ ದಿನದ ಅಂತ್ಯಕ್ಕೆ 3ವಿಕೆಟ್​ ಕಳೆದುಕೊಂಡು 263 ರನ್​ ಗಳಿಸಿದ್ದ ಆಂಗ್ಲರು​, ಇಂದು ಕೂಡ ಭಾರತೀಯ ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ನಿನ್ನೆ 128 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ರೂಟ್​, ಇಂದು 200ರ ಗಡಿ ದಾಟುವ ಮೂಲಕ 100ನೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು.

ರೂಟ್​ಗೆ ಮೊದಲ ಸೆಷನ್ ಆರಂಭದಿಂದ ಸಾಥ್​ ನೀಡಿದ ಅಲ್​ರೌಂಡರ್​ ಬೆನ್​ಸ್ಟೋಕ್​ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತನ್ನ ಬತ್ತಳಿಕೆ ಮತ್ತೊಂದು ಫಿಫ್ಟಿಯನ್ನು ಹಾಕಿಕೊಂಡರು. ಅಲ್ಲದೆ, ಬೌಲರ್​ಗಳು ನಿನ್ನೆಯಂತೆ ಇಂದು ಸಂಜೆಯವರೆಗೂ ವಿಕೆಟ್​ ಪಡೆಯಲು ಹೆಣಗಾಡಿದರು. ಆದರೆ, ಅಂತಿಮ ಸೆಷನ್​ನಲ್ಲಿ ಭಾರತದ ಬೌಲರ್​ಗಳು ಆಂಗ್ಲರನ್ನು ಬಹುಬೇಗನೇ ಪೆವಿಲಿಯನ್​ ಕಳುಹಿಸುವಲ್ಲಿ ಯಶಸ್ವಿಯಾದರು.

ಊಟದ ವಿರಾಮದ ವೇಳೆಗೆ ಇಂಗ್ಲೆಂಡ್​ 3 ವಿಕೆಟ್​​ಗೆ 355 ರನ್​ ಗಳಿಸಿತ್ತು. ಅದಾಗಲೇ ರೂಟ್​ 150ರ ಗಡಿ ದಾಟಿದ್ದರೆ, ನಾಯಕನಿಗೆ ಸಾಥ್​ ನೀಡುತ್ತಿದ್ದ ಸ್ಟೋಕ್ಸ್​ ತನ್ನ 23ನೇ ಅರ್ಧಶತಕ ಪೂರೈಸಿದರು. ಆದರೆ, ಭಾರತದ ಬೌಲರ್​ಗಳು ವಿಕೆಟ್​ ಪಡೆಯಲಾಗದೆ ಸುಸ್ತಾದರು. ವಿರಾಮದ ನಂತರವೂ ಈ ಇಬ್ಬರ ಆಟ ಬೃಹತ್​ ಇನ್ನಿಂಗ್ಸ್​ ಕಟ್ಟುವತ್ತ ಸಾಗಿತು.

ಬ್ರಾಡ್ಮನ್​ ದಾಖಲೆ ಸರಿಗಟ್ಟಿದ ಜೋ ರೂಟ್​:ಈ ಮೂಲಕ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿರುವ ಜೋ ರೂಟ್ ವಿಶಿಷ್ಟ ದಾಖಲೆ ಬರೆದವರ ಸಾಲಿಗೆ ಸೇರಿಕೊಂಡರು. ಟೆಸ್ಟ್​​ನಲ್ಲಿ ಸತತ ನಾಲ್ಕು ಬಾರಿ 150+ ರನ್​ ಸಾಧಿಸಿದ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಮೊದಲ ಸ್ಥಾನದಲ್ಲಿದ್ದಾರೆ.

ನಂತರದ ಸ್ಥಾನದಲ್ಲಿ ಸತತ 3 ಬಾರಿ 150+ ರನ್​ಗಳ ಸಾಧನೆಗೈದ ವ್ಯಾಲಿ ಹಮ್ಮಾಂಡ್, ಡಾನ್ ಬ್ರಾಡ್ಮನ್, ಜಹೀರ್ ಅಬ್ಬಾಸ್, ಮುದಾಸ್ಸರ್ ನಜರ್ ಹಾಗೂ ಟಾಮ್ ಲಾಥಮ್ ಇದ್ದಾರೆ. ಈ ಪಟ್ಟಿಗೀಗ ರೂಟ್ ಸೇರಿಕೊಂಡಿದ್ದಾರೆ. ಅಲ್ಲದೆ, ಟೆಸ್ಟ್​​​​ನಲ್ಲಿ ಈವರೆಗೂ 20 ಶತಕ ಸಿಡಿಸಿರುವ ರೂಟ್ ಈ ಪೈಕಿ 10 ಬಾರಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ. ಕೊಹ್ಲಿ ಕೂಡ 10 ಬಾರಿ 150ಕ್ಕೂ ಅಧಿಕ ರನ್​​ ಬಾರಿಸಿದ್ದಾರೆ.

ಇದನ್ನೂ ಓದಿ...ಜೋ ರೂಟ್​ ಮತ್ತೊಂದು ದಾಖಲೆ: ಶತಕದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ

ಆದರೆ, ಬಿರುಸಿನ ದಾಳಿ ನಡೆಸುತ್ತಾ ಶತಕದತ್ತ ಮುನ್ನುಗ್ಗುತ್ತಿದ್ದ ಸ್ಟೋಕ್ಸ್​ (82), ನದೀಮ್​ ಬೌಲಿಂಗ್​ನಲ್ಲಿ ಸಿಕ್ಸರ್​ ಬಾರಿಸಲು ಹೋಗಿ ಚೇತೇಶ್ವರ ಪೂಜಾರಗೆ ಕ್ಯಾಚಿತ್ತರು. 10 ಬೌಂಡರಿ ಮತ್ತು 3 ಸಿಕ್ಸರ್​​ ಅವರ ಅರ್ಧಶತಕದಲ್ಲಿ ಸೇರಿವೆ. ರೂಟ್​ ಮತ್ತು ಸ್ಟೋಕ್ಸ್​ ಅಬ್ಬರದ ಬ್ಯಾಟಿಂಗ್​​ನಿಂದ 4ನೇ ವಿಕೆಟ್​ಗೆ 124 ರನ್​ಗಳ ಜೊತೆಯಾಟ ಮೂಡಿಬಂತು.

ಮೊದಲನೇ ದಿನದಿಂದಲೂ ಭಾರತದ ವೇಗಿಗಳನ್ನು ಕಾಡಿದ ರೂಟ್​ 143ನೇ ಓವರ್​ನ 2ನೇ ಎಸೆತದಲ್ಲಿ ಸಿಕ್ಸರ್​ ಬಾರಿಸುವ ಮೂಲಕ ದ್ವಿಶತಕ ಪೂರೈಸಿಕೊಂಡರು. ಆದರೆ, ಇನ್ನೂರರ ಗಡಿ ದಾಟಿ 250ರತ್ತ ಮುನ್ನುಗ್ಗುತ್ತಿದ್ದ ರೂಟ್​​ಗೆ​ ಸ್ಪಿನ್ನರ್​ ಶಹಬಾದ್​ ನದೀಮ್​ ಪೆವಿಲಿಯನ್​ ದಾರಿ ತೋರಿಸಿದರು. ಎಲ್​ಬಿಗೆ ಬಲಿಯಾದ ರೂಟ್​ನ 218ರನ್​ಗಳ ಆಟದಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್​ ಸೇರಿವೆ.

ನಿನ್ನೆ ಮತ್ತು ಇಂದು ದಂಡನೆಗೆ ಒಳಗಾಗಿದ್ದ ಬೌಲರ್​ಗಳು ಎರಡನೇ ದಿನದ ಕೊನೆಯ ಸೆಷನ್​​ನಲ್ಲಿ ಮತ್ತೆ ಹಳಿಗೆ ಮರಳಿದರು. ನಾಯಕನ ಜೊತೆ ಅರ್ಧಶತಕ ಜೊತೆಯಾಟವಾಡಿದ ಪೋಪ್ (34)​​, ಅಶ್ವಿನ್​ ಬೌಲಿಂಗ್​​ನಲ್ಲಿ ಎಲ್​​ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಕ್ರೀಸ್​ಗೆ ಬಂದ ಜೋಸ್​ ಬಟ್ಲರ್ ಮತ್ತು ಬೆಸ್​​ ಭಾರತದ​ ಬೌಲರ್​ಗಳಿಗೆ ಬೆಂಡೆತ್ತಲು ಶುರು ಮಾಡಿದರು. ಈಗಾಗಲೇ ಆರು ವಿಕೆಟ್​ ಕಳೆದುಕೊಂಡಿದ್ದ ಇಂಗ್ಲೆಂಡ್​ 500ರನ್​ಗಳ ಬೃಹತ್​ ಮೊತ್ತ ಪೇರಿಸಿತ್ತು.

30 ರನ್​ ಗಳಿಸಿದ್ದ ಬಟ್ಲರ್​,​ ಇಶಾಂತ್​ ಶರ್ಮಾ ಬೌಲಿಂಗ್​​ನಲ್ಲಿ ಬೋಲ್ಡ್​ ಆದರು. ಈ ಮೂಲಕ ಇಶಾಂತ್​ ಈ ಟೆಸ್ಟ್​ನಲ್ಲಿ ಮೊದಲ ವಿಕೆಟ್​ ಪಡೆದುಕೊಂಡರು. ಬಟ್ಲರ್​ ಔಟಾದ ನಂತರದ ಎಸೆತದಲ್ಲೇ ಇಶಾಂತ್​ಗೆ ಜೋಫ್ರಾ ಆರ್ಚರ್​​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಈ ಮೂಲಕ ಇಂಗ್ಲೆಂಡ್​ 525 ರನ್​ಗೆ 8 ವಿಕೆಟ್​ ಕಳೆದುಕೊಂಡಿತು. 175ನೇ ಓವರ್​ನ ಮೊದಲ ಬಾಲ್​​ನಲ್ಲಿ ಹಿಟ್​ಮ್ಯಾನ್ ರೋಹಿತ್​ ಶರ್ಮಾನತ್ತ ಬೆಸ್​ ಹೊಡೆದರು. ಆದರೆ, ಗಾಳಿಯಲ್ಲಿ ಬಂದ ಬಾಲ್​ ಅನ್ನು ರೋಹಿತ್​ ಶರ್ಮಾ ಕೈ ಚೆಲ್ಲಿದರು. ಭಾರತದ ಪರ ಇಶಾಂತ್​, ನದೀಮ್​, ಅಶ್ವಿನ್​, ಬುಮ್ರಾ ತಲಾ 2 ವಿಕೆಟ್​ ಪಡೆದುಕೊಂಡಿದ್ದಾರೆ.

Last Updated : Feb 6, 2021, 6:59 PM IST

ABOUT THE AUTHOR

...view details